ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯುವ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಪೆದ್ದಿ’ ಚಿತ್ರವು ಸದ್ಯ ಇಡೀ ಸೌತ್ ಸಿನಿಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜೂನ್ 4 ರಂದು ತೆರೆಕಾಣಲಿರುವ ಈ ಹೈ-ವೋಲ್ಟೇಜ್ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾದಲ್ಲಿ ರಾಮ್ ಚರಣ್ ಗೆ ನಾಯಕಿಯಾಗಿ ಬಾಲಿವುಡ್ ಬೆಡಗು ಜಾನ್ವಿ ಕಪೂರ್ ‘ಅಚ್ಚಿಯಮ್ಮ’ ಎಂಬ ವಿಶಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಈ ಚಿತ್ರಕ್ಕೆ ಜಾನ್ವಿ ಕಪೂರ್ ಅವರಿಗಿಂತ ಮೊದಲು ಅವರ ಸ್ವಂತ ತಂಗಿ ಖುಷಿ ಕಪೂರ್ ಅವರನ್ನು ನಾಯಕಿಯನ್ನಾಗಿ ಪರಿಗಣಿಸಲಾಗಿತ್ತು ಎಂಬ ವಿಷಯ ಈಗ ಹೊರಬಿದ್ದಿದೆ.
ಒಂದೇ ಮನೆಯಲ್ಲಿದ್ದ ಇಬ್ಬರು ಸ್ಟಾರ್ ಸೋದರಿಯರ ನಡುವೆ ನಡೆದ ಈ ರೇಸ್ ಮತ್ತು ಖುಷಿ ಕಪೂರ್ ಅವರನ್ನು ಸಿನಿಮಾದಿಂದ ಕೈಬಿಡಲು ಕಾರಣವಾದ ಮುಜುಗರದ ಆ ಸನ್ನಿವೇಶದ ಬಗ್ಗೆ ನಿರ್ದೇಶಕ ಬುಚ್ಚಿ ಬಾಬು ಸನಾ ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ನಾನು ಮೊದಲು ಖುಷಿ ಕಪೂರ್‌ಗೆ ಕಥೆ ವಿವರಿಸಿದ್ದೆ. ಆದರೆ ಅವರನ್ನು ಖುದ್ದಾಗಿ ನೋಡಿದಾಗ, ಅವರು ಈ ಪಾತ್ರಕ್ಕೆ ತುಂಬಾ ಚಿಕ್ಕ ವಯಸ್ಸಿನವರಂತೆ ಕಂಡರು. ಒಂದೇ ಮನೆಯಲ್ಲಿ ತಂಗಿಯನ್ನು ಬೇಡವೆಂದು ಅಕ್ಕ ಜಾನ್ವಿಗೆ ಅದೇ ಕಥೆ ಹೇಳುವುದು ನನಗೆ ಮುಜುಗರ ತಂದಿತ್ತು. ಖುಷಿ ಬೇಸರ ಮಾಡಿಕೊಂಡಿದ್ದಾರಾ ಎಂದು ನಾನು ಜಾನ್ವಿಯನ್ನೂ ಕೇಳಿದ್ದೆ.
ನಂತರ ನಾನು ಖುಷಿ ಕಪೂರ್‌ರನ್ನು ಭೇಟಿಯಾಗಿ, ನನಗೆ ಈ ಚಿತ್ರಕ್ಕೆ ನೀವು ಬೇಡ, ನಿಮ್ಮ ಅಕ್ಕ ಬೇಕು ಎಂದು ನೇರವಾಗಿ ಹೇಳಿ ಕ್ಷಮೆಯನ್ನೂ ಕೇಳಿದ್ದೇನೆ. ಸಿನಿಮಾದ ಹಿತದೃಷ್ಟಿಯಿಂದ ಇಂತಹ ನಿರ್ಧಾರಗಳು ಅನಿವಾರ್ಯ. ಆರಂಭದಿಂದಲೂ ಈ ಪಾತ್ರಕ್ಕೆ ಜಾನ್ವಿ ಸೂಕ್ತ ಎಂದು ನನ್ನ ಮನಸ್ಸಿನಲ್ಲಿತ್ತು” ಎಂದು ನಿರ್ದೇಶಕರು ಹೇಳಿದ್ದಾರೆ.
ಈ ಚಿತ್ರದಲ್ಲಿ ಜಾನ್ವಿ ಕಪೂರ್ ‘ಅಚ್ಚಿಯಮ್ಮ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದ ನಂತರ ಇದು ಅವರ ಎರಡನೇ ತೆಲುಗು ಸಿನಿಮಾವಾಗಿದೆ.
ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯ ಸುತ್ತ ಈ ಚಿತ್ರದ ಕಥೆ ಸಾಗಲಿದ್ದು, ರಾಮ್ ಚರಣ್ ಇದರಲ್ಲಿ ರಗಡ್ ಪೆಹಲ್ವಾನ್ ಅವತಾರದಲ್ಲಿ ಭಾರಿ ಬಾಡಿ ಬಿಲ್ಡ್ ಮಾಡಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ದಿವ್ಯೇಂದು, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶ್ರುತಿ ಹಾಸನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂದು ತಿಳಿದು ಬಂದಿದೆ.



