September 2, 2026
Wednesday, September 2, 2026
spot_img

ರಾಜ್ಯದಲ್ಲಿ ಜನ ವಿರೋಧಿ, ಭ್ರಷ್ಟರ ಕೂಟ ಅಧಿಕಾರ ನಡೆಸುತ್ತಿದೆ: ಚಿತ್ರದುರ್ಗದಲ್ಲಿ ಛಲವಾದಿ ವಾಗ್ದಾಳಿ

ಹೊಸದಿಗಂತ ವರದಿ ಚಿತ್ರದುರ್ಗ:

ರಾಜ್ಯದಲ್ಲಿ ಭ್ರಷ್ಟಾಚಾರದ ಕೂಟ ಅಧಿಕಾರ ನಡೆಸುತ್ತಿದ್ದು, ಅನಿವಾರ್ಯವಾಗಿ ಅದನ್ನು ಸರ್ಕಾರ ಎಂದು ಕರೆಯುವಂತಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಯುವಜನತೆ, ರೈತರ, ಮಹಿಳಾ ವಿರೋಧ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರ, ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ 10 ದಿನಗಳ ಕಾಲ ಬಳ್ಳಾರಿಗೆ ಪಾದಯಾತ್ರೆ ಮಡೆಸುತ್ತಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಪ್ರಾರಂಭಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿ.ಶ್ರೀರಾಮುಲು, ಜನಾರ್ಧನರೆಡ್ಡಿ, ರಾಜುಗೌಡ ಅವರ ನೇತೃತ್ವದಲ್ಲಿ ಈ ಪಾದಾಯಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.

ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುವ ಕುರಿತು ಬೆದರಿದ ರಾಜ್ಯ ಸರ್ಕಾರ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಿತು. ಮಂತ್ರಿ ಮಂಡಲದಲ್ಲಿ ಇನ್ನೂ ಒಂದು ಡಜನ್ ಕಳಂಕಿತ ಸಚಿವರಿದ್ದು, ಮುಂದಿನ ದಿನಗಳಲ್ಲಿ ಅವರೆಲ್ಲರೂ ಬೆಳಕಿಗೆ ಬರಲಿದ್ದಾರೆ. ಕಳೆದ 3-4 ತಿಂಗಳಿನಿಂದ ’ಗೃಹಲಕ್ಷ್ಮಿ’ ಯೋಜನೆಯಡಿ ಹಣ ಬಿಡುಗಡೆಯಾಗಿಲ್ಲ. ಈ ಹಿಂದೆ 5000 ಕೋಟಿ ರೂ. ಹಣ ಬಂದಿರಲಿಲ್ಲ. ಆ ಹಣ ಯಾವ ಲಕ್ಷ್ಮಿಗೆ ಕೊಟ್ಟಿದೆ ಎಂಬುದನ್ನು ಸರ್ಕಾರ ಹೇಳುತ್ತಿಲ್ಲ. ಈಗ ಮತ್ತೆ 5000 ಕೋಟಿ ಸೇರಿ ಒಟ್ಟು 10,000 ಕೋಟಿ ರೂ. ಹಣ ಬಾಕಿ ಇದೆ ಎಂದು ಕಿಡಿಕಾರಿದರು. 

ರಾಜ್ಯ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿಗೆ ಪ್ರತಿವರ್ಷ 53,000 ಕೋಟಿ ನೀಡುವುದಾಗಿ ಹೇಳಿತ್ತು. ಆದರೆ ಕಳೆದ ವರ್ಷ 42,000 ಕೋಟಿ, ಈ ವರ್ಷ 44,000 ಕೋಟಿ ಹಣ ಕಾಯ್ದಿರಿಸಿದೆ. ಅದರಲ್ಲಿ 22,000 ಕೋಟಿ ರೂ.ಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಉಳಿದಿರುವ 22,000 ಕೋಟಿ ರೂ.ಗಳಲ್ಲಿ 15,000ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ನೀಡುವ ಮೂಲಕ ಶೋಷಿತ ಸಮುದಾಯಗಳಿಗೆ ದ್ರೋಹ ಮಾಡಿದೆ. ಉಳಿದ 7,000 ಕೋಟಿ ಹಣವನ್ನು ತೆಲಂಗಾಣ, ಬಳ್ಳಾರಿ ಚುನಾವಣೆಗಳಿಗೆ ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಕೆಪಿಎಸ್‌ಸಿ ಹಗರಣ ನಡೆಸುವ ಮೂಲಕ ಸರ್ಕಾರಿ ಕೆಲಸಕ್ಕೆ ಸೇರುವವರಿಗೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ರಾಜ್ಯದಲ್ಲಿ 192 ತಾಲ್ಲೂಕುಗಳಲ್ಲಿ ಬರಗಾಲವಿದ್ದು, ಪರಿಹಾರ ನೀಡಲು ಹಣವಿಲ್ಲದ ಕಾರಣ ರಾಜ್ಯ ಸರ್ಕಾರ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದೆ. ರಾಜದಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಸುಲಿಗೆ ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ವಿಫಲವಾಗಿರುವ ಗೃಹಸಚಿವ ಪ್ರಿಯಾಂಕ ಖರ್ಗೆ ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಕೆ.ಟಿ.ಕುಮಾರಸ್ವಾಮಿ ಮಾಜಿ ಅಧ್ಯಕ್ಷ ಎ.ಮುರಳಿ, ರಾಜ್ಯ ಕಾರ್ಯಕಾರಿ ಸದಸ್ಯ ರುದ್ರಯ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !