ಉಕ್ರೇನ್ ನಲ್ಲಿ ನವೀನ್ ಸಾವು: ನೀರವ ಮೌನಕ್ಕೆ ಜಾರಿದ ಹುಟ್ಟೂರು

ಹೊಸದಿಗಂತ ವರದಿ, ರಾಣೇಬೆನ್ನೂರ:

ರಷ್ಯಾ ಮತ್ತು ಉಕ್ರೇನ್ ಮಧ್ಯ ಸಂಭವಿಸುತ್ತಿರುವ ಯದ್ಧದಿಂದ ಜಿಲ್ಲೆಯಿಂದ ವೈದ್ಯಕೀಯ ವ್ಯಾಸಂಗ ಮಾಡಲು ಹೋಗಿದ್ದ ರಾಣೇಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಗೌಡ ಗ್ಯಾನಗೌಡ್ರ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಬಲಿಯಾಗಿದ್ದಾನೆ.

ನವೀನ್ ಶೇಖರಗೌಡ ಗ್ಯಾನಗೌಡ್ರ ಸಾವಿನಿಂದ ಇದೀಗ ಚಳಗೇರಿ ಗ್ರಾಮದಲ್ಲಿ ನೀರವ ಮೌನದಿಂದ ಕೂಡಿದೆ. ತಂದೆ ತಾಯಿ ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಜನರು ಆಗಮಿಸಿ ನವೀನ್ ತಂದೆ ತಾಯಿಯರಿಗೆ ಸಾಂತ್ವನ ಹೇಳುವ ದೃಶ್ಯ ಸಾಮಾನ್ಯವಾಗಿ ಮಂಗಳವಾರದಂದು ಕಂಡು ಬಂದಿತು.

ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಎಂಬಿಬಿಎಸ್ ಕಲಿತು ಬರುತ್ತೇನೆ ಎಂದು ಮಾತಾಪಿತೃಗಳಿಗೆ ಅಂದು ಹೇಳಿಹೋದವನು ಮತ್ತು ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆ ಎನ್ನುವುದನ್ನು ಅರಗಿಸಿಕೊಳ್ಳುವುದಕ್ಕೂ ಸಾಧ್ಯವಾಗದ ಸ್ಥಿತಿ ಅವರದಾಗಿತ್ತು. ಎಲ್ಲದಿಯ ಬಾರೋ ಯಪ್ಪಾ ನಿನ್ನ ನೋಡಂಗಾಗೇತಿ ಎಂದು ಹೆತ್ತಮ್ಮ ವಿಜಯಲಕ್ಷ್ಮೀ ಗೋಳಾಟ ನೋಡುಗರ ಮನಕಲುಕುವಂತಿತ್ತು. ಸಂಬಂಧಿಕರ ಗೋಳಾಡುವ ದೃಶ್ಯ ಗ್ರಾಮಸ್ಥರು ಕಣ್ಣೀರು ಹಾಕುವ ದೃಶ್ಯ ನಿಜಕ್ಕೂ ಮನಕರುಗುವಂತಿತ್ತು.

ಕರೆನ್ಸಿ ಬದಲಾವಣೆಗೆ ಹೋಗಿದ್ದ
ನವೀನ್ ಉಕ್ರೇನ್ ದೇಶದ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ೪ನೇ ವರ್ಷದ ಎಂಬಿಬಿಎಸ್ ವ್ಯಾಸಂಗ್ ಮಾಡುತ್ತಿದ್ದನು. ಈತನು ಖಾರ್ಕಿವ್‌ನಲ್ಲಿ ಐದು ವಿದ್ಯಾರ್ಥಿಗಳೊಂದಿಗೆ ವಾಸವಾಗಿದ್ದನು. ಆದರೆ ನವೀನನು ಬೆಳಗಿನ ಜಾವ ೭.೩೦ ರ ಸುಮಾರಿಗೆ ಕರೆನ್ಸಿ ಬದಲಾವಣೆ ಹಾಗೂ ತಿಂಡಿ ತಿನ್ನುವ ಸಲುವಾಗಿ ಹೊರಗಡೆ ಹೋದಾಗ ರಷ್ಯಾ ಸೇನೆಯ ರಾಕೆಟ್ ದಾಳಿಗೆ ಬಲಿಯಾಗಿದ್ದಾನೆ ಎಂದು ಆತನ ಸಂಬಂಧಿಕರು ವಿವರಿಸಿದರು.

ಶೇಖರಗೌಡ ಮತ್ತು ವಿಜಯಲಕ್ಷ್ಮೀ ದಂಪತಿಗಳಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ಹರ್ಷ ಎಂಬಾತನು ಬೆಂಗಳೂರಿನಲ್ಲಿ ಪಿಎಚ್‌ಡಿ ವ್ಯಾಸಾಂಗ ಮಾಡುತ್ತಿದ್ದಾನೆ. ಚಿಕ್ಕಮಗ ನವೀನ್ ಈತನು ಎಂಬಿಬಿಎಸ್ ವ್ಯಾಸಂಗಕ್ಕಾಕಿ ಉಕ್ರೇನ್‌ನ ಖಾರ್ಕಿವ್ ದಲ್ಲಿ ವಾಸವಾಗಿದ್ದನ್ನು ಎಂದು ಸಂಬಂಧಿಕರು ಪತ್ರಿಕೆಗೆ ತಿಳಿಸಿದರು.

ಸಾಂತ್ವನ ಹೇಳಿದ ಪಿಎಂ, ಸಿಎಂ
ನವೀನ್ ಅವರ ತಂದೆಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೇರಿದಂತೆ ಅನೇಕ ಗಣ್ಯರು ಪೋನ್ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದು ಕಂಡು ಬಂದಿತು. ರಾಣೇಬೆನ್ನೂರಿನ ಶಾಸಕ ಅರುಣಕುಮಾರ ಪೂಜಾರ ಸೇರಿದಂತೆ ನಗರದ ಅನೇಕ ಗಣ್ಯರು ನವೀನ್ ಮನೆಗೆ ತೆರಳಿ ತಂದೆ ತಾಯಿಯರಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!