ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖೌರಾ-ಅಗರ್ತಲಾ ರೈಲು ಸಂಪರ್ಕದ ಉದ್ಘಾಟನೆಯನ್ನು ಐತಿಹಾಸಿಕ ಕ್ಷಣ ಕರೆದ ಪ್ರಧಾನಿ ನರೇಂದ್ರ ಮೋದಿ, ಇದು ಬಾಂಗ್ಲಾದೇಶ ಮತ್ತು ಭಾರತದ ಈಶಾನ್ಯ ರಾಜ್ಯಗಳ ನಡುವಿನ ಮೊದಲ ರೈಲು ಸಂಪರ್ಕ ಎಂದರು.
ವರ್ಚುವಲ್ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಜಂಟಿಯಾಗಿ ಮೂರು ಭಾರತೀಯ ನೆರವಿನ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ, ತ್ರಿಪುರಾ ತನ್ನ ವಿಮೋಚನಾ ಹೋರಾಟದ ದಿನಗಳಿಂದಲೂ ಬಾಂಗ್ಲಾದೇಶದೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿದೆ. ಕಳೆದ 9 ವರ್ಷಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಆಂತರಿಕ ವ್ಯಾಪಾರವು ಮೂರು ಪಟ್ಟು ಹೆಚ್ಚಾಗಿದೆ ಎಂದರು.
ಅಖೌರಾ-ಅಗರ್ತಲಾ ಕ್ರಾಸ್-ಬಾರ್ಡರ್ ರೈಲು ಸಂಪರ್ಕ, ಖುಲ್ನಾ-ಮೊಂಗ್ಲಾ ಪೋರ್ಟ್ ರೈಲು ಮಾರ್ಗ ಮತ್ತು ಮೈತ್ರೀ ಥರ್ಮಲ್ ಪವರ್ ಪ್ರಾಜೆಕ್ಟ್‌ನ ಎರಡನೇ ಘಟಕವನ್ನು ಉದ್ಘಾಟಿಸಿದ್ದಕ್ಕೆ ಸಂತಸವನ್ನು ಹೊರಹಾಕಿದರು. ಗಡಿಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸುವ ಸಲುವಾಗಿ, ಭಾರತ ಮತ್ತು ಬಾಂಗ್ಲಾದೇಶ ಭೂ ಗಡಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದರು. ಮತ್ತು ಕಳೆದ ಒಂಬತ್ತು ವರ್ಷಗಳಲ್ಲಿ, ಢಾಕಾ, ಶಿಲ್ಲಾಂಗ್, ಅಗರ್ತಲಾ, ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ 3 ಹೊಸ ಬಸ್ ಸೇವೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
2020 ರಿಂದ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪಾರ್ಸೆಲ್ ಮತ್ತು ಕಂಟೈನರ್ ರೈಲುಗಳು ಸಹ ಓಡುತ್ತಿವೆ. ವಿಶ್ವದ ಅತಿದೊಡ್ಡ ಕ್ರೂಸ್ ಗಂಗಾ ವಿಲಾಸ್ ಅನ್ನು ಪ್ರಾರಂಭಿಸುವ ಮೂಲಕ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದೆ ಎಂದರು.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೂರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯೊಂದಿಗೆ “ಭಾರತ-ಬಾಂಗ್ಲಾದೇಶ ಸಹಕಾರದ ಯಶಸ್ಸನ್ನು ಆಚರಿಸಲು ಮತ್ತೊಮ್ಮೆ ನಾವು ಸಂಪರ್ಕ ಹೊಂದಿದ್ದೇವೆ ಎಂಬುದು ಸಂತೋಷದ ವಿಷಯವಾಗಿದೆ. ನಮ್ಮ ಸಂಬಂಧಗಳು ನಿರಂತರವಾಗಿ ಹೊಸ ಎತ್ತರವನ್ನು ತಲುಪುತ್ತಿವೆ” ಎಂದು ಪ್ರಧಾನಿ ತಿಳಿಸಿದರು.