ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಅತ್ಯಂತ ಪವಿತ್ರ ಕ್ಷೇತ್ರವಾದ ಉಜ್ಜೈನಿಯ ಶ್ರೀ ಮಹಾಕಾಳೇಶ್ವರ ದೇಗುಲ ಪರಿಸರದಲ್ಲಿ 900 ಮೀ.ವಿಸ್ತಾರದ ಮಹಾಕಾಳ್ ಲೋಕ್ ಕಾರಿಡಾರನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲೋಕಾರ್ಪಣೆಗೊಳಿಸಿದರು.
ದೇಶದಲ್ಲಿ ಆಧ್ಯಾತ್ಮಿಕ ಕೇಂದ್ರಗಳ ಗತವೈಭವವನ್ನು ನಾವು ಪುನಃಸ್ಥಾಪಿಸುತ್ತಿದ್ದೇವೆ ಎಂಬುದಾಗಿ ಅವರು ಘೋಷಿಸಿದ್ದಾರೆ.ಉಜ್ಜೈನಿ ಕೇವಲ ಭಾರತೀಯ ಭೌಗೋಳಿಕ ಕೇಂದ್ರಸ್ಥಾನವಾಗಿರದೆ, ಭಾರತದ ಆತ್ಮವೇ ಆಗಿದೆ ಎಂದು ಅವರು ಒತ್ತಿ ಹೇಳಿದರು .
೮೫೬ಕೋ.ರೂ.ವೆಚ್ಚದ ಈ ಮಹಾಕಾಳ್ ಲೋಕ್ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು 351 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.ಉಜ್ಜೈನಿಯು ಭಾರತದ ಪ್ರಗತಿ ಮತ್ತು ಜ್ಞಾನ ನೆಲೆಯಾಗಿ ಸಾವಿರಾರು ವರ್ಷಗಳಿಂದ ಬೆಳೆದುಬಂದಿದ್ದು, ಈ ಶ್ರೇಷ್ಠ ಪರಂಪರೆ ಮುಂದುವರಿಯಬೇಕಾಗಿದೆ ಎಂದು ಮೋದಿಯವರು ಹೇಳಿದ್ದಾರೆ.
ಸ್ವಾತಂತ್ರ್ಯದ ಅಮೃತಕಾಲದಲ್ಲಿ ನಾವು, ವಸಾಹತುಶಾಹಿಯ ಸಂಕೋಲೆಗಳನ್ನು ಕಿತ್ತೊಗೆದು , ‘ಪಂಚಪ್ರಾಣ್’ ತತ್ವದ ಆಧಾರದಲ್ಲಿ ಸರ್ವಾಂಗೀಣ ಉನ್ನತಿ ಸಾಸಬೇಕಾಗಿದೆ.ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಪವಿತ್ರ ಚಾರ್‌ಧಾಮ್‌ನ್ನು ಸರ್ವಋತು ರಸ್ತೆಗಳ ಮೂಲಕ ಸಂಪರ್ಕಿಸಲಾಗುತ್ತಿದೆ .ಎಲ್ಲಿ ಸಂಶೋಧನೆಗಳು ನಡೆಯುತ್ತಿದ್ದವೋ ಅಲ್ಲೀಗ ನವೀಕರಣ ಅಥವಾ ಪುನರುತ್ಥಾನ ಕಾರ್ಯ ನಡೆಯುತ್ತಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ನಮ್ಮ ಪ್ರಾಚೀನ ಕೊನಾರ್ಕ್ ಸೂರ್ಯ ದೇವಾಲಯ, ಮೊಧೇರಾ ದೇವಾಲಯ, ಬ್ರಹ್ಮ ದೇವೇಶ್ವರ್ ದೇವಾಲಯ, ಶಂಕರಾಚಾರ್ಯ ದೇವಾಲಯಗಳ ಭವ್ಯತೆ ಸರಿಸಾಟಿಯಿಲ್ಲದ್ದಾಗಿದೆ ಎಂದ ಮೋದಿಯವರು, ಯಶಸ್ಸಿನ ಉನ್ನತಿ ತಲುಪುವಲ್ಲಿ, ರಾಷ್ಟ್ರವು ಮೊದಲು ತನ್ನ ಸಾಂಸ್ಕೃತಿಕ ಉನ್ನತಿ ಮತ್ತು ತನ್ನ ಅನನ್ಯತೆಗಳ ಬಗ್ಗೆ ಹೆಮ್ಮೆ-ಅಭಿಮಾನ ತಾಳುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಉಜ್ಜೈನಿಯ ಪ್ರತಿ ಕಣ ಕಣಗಳಲ್ಲೂ ಆಧ್ಯಾತ್ಮಿಕತೆ ಮತ್ತು ಪವಿತ್ರ ದೈವೀಶಕ್ತಿಯಿದೆ.ಭಾರತದ ಉನ್ನತಿಯಲ್ಲಿ ಉಜ್ಜೈನಿಯ ನೇತೃತ್ವ ಇರಲಿದ್ದು, ಯಾಕೆಂದರೆ ಉಜ್ಜೈನಿಯು ಸಾವಿರಾರು ವರ್ಷಗಳಿಂದ ಪ್ರಗತಿ, ಜ್ಞಾನ, ಘನತೆ ಮತ್ತು ಸಾಹಿತ್ಯರಂಗದ ಯಶೋಗಾಥೆ ಹೊಂದಿದೆ. ಜ್ಯೋತಿಲಿಂಗಗಳ ಅಭಿವೃದ್ಧಿ ಎಂದರೆ ಭಾರತೀಯ ಆಧ್ಯಾತ್ಮಿಕ ಅನನ್ಯತೆಯ ಅಭಿವೃದ್ಧಿ ಎಂದೇ ಅರ್ಥ ಎಂದು ಅವರು ನುಡಿದರು.
ಭಗವಾನ್ ಶಿವನ ಈ ಶಕ್ತಿ ಕೇಂದ್ರ ಅತ್ಯಂತ ಅಸಾಧಾರಣ, ಅಸಾಮಾನ್ಯ , ಅವಿಸ್ಮರಣೀಯ ಮತ್ತು ಅನೂಹ್ಯವಾದ ಅನುಭೂತಿಯ ಕೇಂದ್ರವಾಗಿದ್ದು, ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ವಿಶ್ವದರ್ಜೆಯ ಸೌಕರ್ಯಗಳನು ಒದಗಿಸಲಾಗುವುದು ಎಂದರು.
ಈ ಸಂದರ್ಭ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಉಪಸ್ಥಿತರಿದ್ದರು. ಕೈಲಾಶ್ ಖೇರ್ ಅವರು “ಜೈ ಶ್ರೀ ಮಹಾಕಾಳ್”ಭಕ್ತಿಗೀತೆ ಹಾಡಿದಾಗ ಇಡಿ ಸಭೆಯೇ ಮಂತ್ರ ಮುಗ್ಧವಾಗಿ ಆಲಿಸಿತು.