September 6, 2026
Sunday, September 6, 2026
spot_img

ಜೈನ ಸಮುದಾಯ ಭವನ ಉದ್ಘಾಟನೆ: ಜಾತಿ, ಧರ್ಮ, ಭಾಷೆಗಿಂತ ಮಾನವೀಯತೆಯೇ ಮುಖ್ಯ: ಲಕ್ಷ್ಮೀ ಹೆಬ್ಬಾಳ್ಕರ್

ಹೊಸದಿಗಂತ ವರದಿ ಬೆಳಗಾವಿ:

ಜಾತಿ, ಪಂಥ, ಭಾಷೆಗಿಂತ ನನಗೆ ಮನುಷ್ಯತ್ವದಲ್ಲಿ ನಂಬಿಕೆ ಇದೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯನ್ನೂ ಸಮಾನ ದೃಷ್ಟಿಯಿಂದ ನೋಡುವುದೇ ನನ್ನ ಆಶಯವಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರು ಗ್ರಾಮದಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜೈನ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಸುಮಾರು ₹70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಜೈನ ಧರ್ಮವು ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಮಾನವೀಯತೆಯ ಅತ್ಯಂತ ಶ್ರೇಷ್ಠ ಸಂದೇಶವನ್ನು ನೀಡಿದೆ. “ಅಹಿಂಸಾ ಪರಮೋ ಧರ್ಮಃ” ಎಂಬ ಸಂದೇಶ ಕೇವಲ ಜೈನ ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಇಡೀ ಮಾನವಕುಲಕ್ಕೆ ದಾರಿ ತೋರಿಸುವ ಮಹತ್ವದ ಮೌಲ್ಯವಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದರು.

ಭಗವಾನ್ ಮಹಾವೀರರು ನಿಷ್ಠೆ, ಸತ್ಯ, ತ್ಯಾಗ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕುವ ಸಂದೇಶವನ್ನು ನೀಡಿದ್ದಾರೆ. ಬಸವಣ್ಣನವರು “ದಯವೇ ಧರ್ಮದ ಮೂಲವಯ್ಯ” ಎಂದು ಸಾರಿದರು. ಯೇಸು ಕ್ರಿಸ್ತರು ಪ್ರೀತಿ, ಕ್ಷಮೆ ಮತ್ತು ಶಾಂತಿಯ ಸಂದೇಶ ನೀಡಿದರು. ಪ್ರವಾದಿ ಮೊಹಮ್ಮದ್ ಅವರೂ ಮಾನವೀಯತೆ ಮತ್ತು ಶಾಂತಿಯ ಮಾರ್ಗವನ್ನು ಬೋಧಿಸಿದರು. ಜಗತ್ತಿನ ಎಲ್ಲ ಮಹಾನ್ ಪುರುಷರ ಸಂದೇಶದ ಸಾರ ಒಂದೇ ಮನುಷ್ಯತ್ವದಿಂದ ಬದುಕಬೇಕು ಎಂಬುದಾಗಿದೆ ಎಂದು ಅವರು ಹೇಳಿದರು.

“ನಾವು ಈ ಭೂಮಿಗೆ ಒಮ್ಮೆ ಮಾತ್ರ ಬರುತ್ತೇವೆ. ಯಾವಾಗ ನಮ್ಮ ಜೀವನ ಮುಗಿಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಬದುಕಿರುವಷ್ಟು ದಿನ ಸತ್ಯ, ಪ್ರಾಮಾಣಿಕತೆ, ಧರ್ಮ ಮತ್ತು ಮಾನವೀಯತೆಯಿಂದ ಬದುಕಬೇಕು” ಎಂದು ಕರೆ ನೀಡಿದರು.

ಜೈನ ಸಮುದಾಯದ ಜನಸಂಖ್ಯೆ ದೊಡ್ಡದಿಲ್ಲದಿದ್ದರೂ, ಸಮುದಾಯದ ಅಭಿವೃದ್ಧಿಗಾಗಿ ಭವನ ನಿರ್ಮಾಣವಾಗಿರುವುದು ಸಂತೋಷದ ವಿಚಾರ. ಸಮಾಜದ ಅಭಿವೃದ್ಧಿಯನ್ನು ಸಂಖ್ಯೆ ಅಥವಾ ಮತಗಳ ಲೆಕ್ಕಾಚಾರದಲ್ಲಿ ತಾವು ನೋಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ, ಇಲ್ಲಿ ಎಷ್ಟು ಜನರಿದ್ದಾರೆ, ಎಷ್ಟು ಮನೆಗಳಿವೆ ಅಥವಾ ಎಷ್ಟು ಮತಗಳಿವೆ ಎಂಬುದನ್ನು ತಾವು ವಿಚಾರಿಸಿರಲಿಲ್ಲ. ಸಮುದಾಯದ ಅಗತ್ಯವನ್ನು ಮಾತ್ರ ಪರಿಗಣಿಸಿ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ್ದಾಗಿ ತಿಳಿಸಿದರು.

ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವನದ ಕಾಮಗಾರಿಯ ಗುಣಮಟ್ಟವನ್ನು ಶ್ಲಾಘಿಸಿದ ಅವರು, ನೀಡಲಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿರುವುದು ಸಂತಸ ತಂದಿದೆ ಎಂದರು.

ತಮ್ಮ ಹೆಸರು ಕಟ್ಟಡದಲ್ಲಿ ಉಳಿಯುವುದಕ್ಕಿಂತ ತಾವು ಮಾಡಿದ ಕೆಲಸ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂಬುದು ಮುಖ್ಯ. ಕೇವಲ ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. “ನಮ್ಮ ಮಾತಿಗಿಂತ ನಮ್ಮ ಕೆಲಸ ಮಾತನಾಡಬೇಕು” ಎಂದು ಅವರು ಹೇಳಿದರು.

ಜೈನ ಸಮುದಾಯ ಭವನ ಮತ್ತು ಮುನಿ ನಿವಾಸವು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಮುಂದಿನ ಪೀಳಿಗೆಗೆ ಜೈನ ಧರ್ಮದ ಅಹಿಂಸೆ, ಸತ್ಯ, ತ್ಯಾಗ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸುವ ವೇದಿಕೆಯಾಗಬೇಕು ಎಂದು ಆಶಿಸಿದರು.

ಪೂಜ್ಯ ಮುನಿವರ್ಯರ ಆಶೀರ್ವಾದದಿಂದ ಈ ಸ್ಥಳ ಮತ್ತಷ್ಟು ಪವಿತ್ರವಾಗಲಿ ಹಾಗೂ ಜೈನ ಸಮುದಾಯವು ಸಮಾಜದ ಎಲ್ಲ ವರ್ಗಗಳೊಂದಿಗೆ ಬೆರೆತು ಬೆಳಗಾವಿಯ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾರೈಸಿದರು.

ಇದನ್ನೂ ಓದಿ:

₹70 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

 ಜೈನ ಸಮುದಾಯ ಭವನ ಉದ್ಘಾಟನೆಯ ಬಳಿಕ ಮಣ್ಣೂರು ಗ್ರಾಮದಲ್ಲಿ ಸುಮಾರು ₹70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಚರಂಡಿ, ಸಿಸಿ ಹಾಗೂ ಕಾಂಕ್ರೀಟ್ ರಸ್ತೆಗಳನ್ನು ಸಹ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಉತ್ತಮ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಜನರ ದೈನಂದಿನ ಬದುಕಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ ಎಂದು ಅವರು ಹೇಳಿದರು. ಈ ವೇಳೆ ಕಾಡಾ ಅಧ್ಯಕ್ಷ ಯುವರಾಜ ಕದಂ, ಉಚಗಾಂವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಜಯವಂತ ಬಾಳೇಕುಂದ್ರಿ, ಸಾಗರ ಕಟಗೆನ್ನವರ, ರಾಜಶ್ರೀ ಜೈನ್, ಸಂತೋಷ ಕೆಂಚನ್ನವರ್, ಮನೋಹರ್ ಬೆಳಗಾಂವ್ಕರ್, ಮಹಾವೀರ ಕೆಂಚನ್ನವರ್, ಸುಧೀರ್ ಬೋಗಾರ್, ಧರ್ಮೇಂದ್ರ ಕೆಂಚನ್ನವರ್, ಪಾರಿಶ್ ಕಟಗೆನ್ನವರ, ಎಸ್.ಎಲ್. ಚೌಗುಲೆ, ಮುಕುಂದ ತೆರಳೆ, ಅಶೋಕ ಚೌಗುಲೆ ಗ್ರಾಮಸ್ಥರು ಕಾಂಗ್ರೆಸ್ ಮುಖಂಡರು  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !