ಹೊಸದಿಗಂತ ವರದಿ, ವಿಜಯಪುರ:
ನರೇಂದ್ರ ಮೋದಿಯವರ ಮೇಲಿನ ಸಮಾಜದ ಪ್ರಭಾವ ಕಡಿಮೆಯಾಯ್ತೋ? ಹಣದ ವ್ಯಾಮೋಹ ಕೆಲಸ ಮಾಡ್ತೋ? ಅಂತ ತೀರ್ಮಾನ ಮಾಡೋದು ಕಷ್ಟ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದಿದ್ದು, ಮೋದಿ ವರ್ಚಸ್ಸು ಕಡಿಮೆ ಆಗಿದೆ ಎನ್ನುವ ವಿಚಾರ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ವರ್ಚಸ್ಸು ಕಡಿಮೆಯಾದರೆ ತಪ್ಪೇನಿದೆ. ನಮ್ಮಲ್ಲಿ ಬಡತನ ಇನ್ನೂ ಇದೆ. ದುಡ್ಡು ಕೊಡ್ತೇವೆ ಅಂದಾಗ ಇಂತಹ ಮೋಸದ ಸೋಲು ಸಹಜ. ಪರೋಕ್ಷವಾಗಿ ಇಂಡಿಯಾ ಗ್ಯಾರಂಟಿಯಿಂದ ಸೋಲಾಯ್ತು ಎಂದು ಹೇಳಿದರು.
ರಾಮಮಂದಿರ ಸೋರುತ್ತಿದೆ, ತರಾತುರಿಯಲ್ಲಿ ಉದ್ಘಾಟನೆಯ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಮಾಡಿಲ್ಲ. ಮೇಲ್ಛಾವಣಿ ಇನ್ನೂ ಆಗಬೇಕಿದೆ. ಇನ್ನೊಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ರಾಮಮಂದಿರ ಆಗಲಿಕೆ ಸಮಯ ಬೇಕಾಗುತ್ತದೆ ಎಂದರು.
ರಾಮಮಂದಿರ ಇರುವ ಕ್ಷೇತ್ರದಲ್ಲಿ ಬಿಜೆಪಿ ಸೋಲು ವಿಚಾರ ಕುರಿತು, ಆಸೆ, ಆಮಿಷಕ್ಕೆ ಒಳಗಾಗಿ ಪ್ರತಿಪಕ್ಷ ಗೆಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆಗೆ ಹೊಡೆತ ಅಂತ ಭಾವಿಸುವ ಹಾಗಿಲ್ಲ. ನಮ್ಮನ್ನು ಗೆಲ್ಲಿಸಿ ಅಂತ ಹೇಳಿದ್ದರು. ರಾಮಮಂದಿರ ಇರುವ ಕ್ಷೇತ್ರದಲ್ಲಿ ಪ್ರತಿಪಕ್ಷ ಮೋಸದಿಂದ ಗೆದ್ದಿದೆ. ಇದು ಮೋಸ ಅಲ್ವೆ, ಈಗ ಏನು ಕೊಟ್ಟಿದ್ದಾರೆ ? ಯಾರೋ ಮಾಡಿದ್ದರೆ ಮೋಸ, ರಾಜಕೀಯ ಪಕ್ಷ ಮಾಡಿದ್ದರೆ ಮೋಸ ಅಲ್ವೆ ?, ಸರ್ಕಾರ ಬಂದರೆ ಕೊಡ್ತೀವಿ ಅಂದಿದ್ರೋ, ಗೆಲ್ಲಿಸಿದ್ರೆ ಕೊಡ್ತೀವಿ ಅಂದಿದ್ರೋ ನೀವೇ ಗಮನಿಸಿ ಎಂದರು.
ಜಾತಿವಾರು ಸ್ವಾಮೀಜಿಗಳು ಸಿಎಂ, ಡಿಸಿಎಂ ಹುದ್ದೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಿಯಮದ ವಿರುದ್ಧ ನಾವು ಹೋಗಲ್ಲ. ಡಿಸಿಎಂ ಹುದ್ದೆ ಬ್ರಾಹ್ಮಣರಿಗೆ ಕೊಡಿ ಎಂದು ನಾವು ಕೇಳಲ್ಲ. ಸಂವಿಧಾನ ಬದ್ಧವಾಗಿ ಪ್ರಸ್ತಾಪ ಇರಬೇಕು. ಜಾತಿವಾರು ಡಿಸಿಎಂ ಹುದ್ದೆ ಸ್ವಾಮೀಜಿಗಳ ಬೇಡಿಕೆಗೆ ಪರೋಕ್ಷವಾಗಿ ವಿರೋಧಿಸಿದರು.
ಹಿಂದು ಧರ್ಮದ ಬಗ್ಗೆ ರಾಹುಲ್ ಗಾಂಧಿ ಅವಹೇಳನ ವಿಚಾರ ಬಗ್ಗೆ, ಸಹಿಷ್ಣುರಾಗಿರುವವರನ್ನು ಕೆಣಕುವುದು ಕೆಲವರಿಗೆ ಚಾಳಿದೆ. ಸಹಿಷ್ಣರನ್ನು ಕೆಣಕಿ ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಪಂಗಡ ಪಂಗಡ ಮಧ್ಯೆ ಬೆಂಕಿ ಹಚ್ಚುವುದು ಸರಿಯಲ್ಲ. ಬೇಜವಾಬ್ದಾರಿ ಹೇಳಿಕೆ ಕೊಡುವುದು ಸರಿಯಲ್ಲ. ಸಮಾಜ ಇಂತಹವರಿಂದ ದೂರ ಇರಬೇಕು ಎಂದರು.