ಹೊಸದಿಗಂತ ವರದಿ ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ 4 ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಪೈಕಿ, ಮುಕ್ತಾಯ ಹಂತದಲ್ಲಿರುವ ತಲಾ 40 ಕೋಟಿ ರೂ. ವೆಚ್ಚದ ಎರಡು ಕಾಮಗಾರಿಗಳನ್ನು, ಆಗಸ್ಟ್ 30ಕ್ಕೆ ಲೋಕಾರ್ಪಣೆ ಮಾಡಲು ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ನಿರ್ದೇಶನ ನೀಡಿದರು.
ಹಿರಿಯೂರು ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಬುಧುವಾರ ತಾಲ್ಲೂಕಿನ ವಿಪತ್ತು ನಿರ್ವಹಣೆ ವಿಷಯಗಳ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಅಂತಿಮ ಹಂತದಲ್ಲಿರುವ ಕಾಮಗಾರಿಗಳಿಗೆ ಚಾಲನೆ ನೀಡಿದರೆ, ಹಿರಿಯೂರಿ ತಾಲ್ಲೂಕಿನ 75 ಹಳ್ಳಿಗಳಲ್ಲಿ ಮನೆ ಮನೆಗೂ ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು. ಇದೇ ವೇಳೆ ಜವಗೊಂಡನಹಳ್ಳಿಯ ಕೆ.ಎಚ್.ಆರ್ ಬಡಾವಣೆಗೆ ಸುವರ್ಣಮುಖಿ ನದಿ ಪಾತ್ರದಿಂದ 1.5 ಕಿ.ಮೀ. ಪೈಪ್‌ಲೈನ್ ನಿರ್ಮಿಸಲು ಅಗತ್ಯ ಇರುವ 10 ಲಕ್ಷ ರೂ. ಅನುದಾನವನ್ನು ಬರ ಪರಿಹಾರ ನಿಧಿಯಿಂದ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಕಾಮಗಾರಿ ಶೇ. 90 ರಷ್ಟು ಪೂರ್ಣಗೊಂಡಿದೆ. ಗಾಯತ್ರಿ ಜಲಾಶಯ ಹಾಗೂ ವಿವಿ ಸಾಗರ ಜಲಾಶಯದ ಮೂಲಗಳಿಂದ ನೀರು ಪಡೆದು, ಜವಗೊಂಡನಹಳ್ಳಿ ಮತ್ತು ಹರ್ತಿಕೋಟೆ ವ್ಯಾಪ್ತಿಯ 75 ಗ್ರಾಮಗಳಿಗೆ ನೀರು ತಲುಪಿಸುವ ಯೋಜನೆ ಇದಾಗಿದ್ದು, ಕಾಲಹರಣ ಮಾಡದೆ ಕಾಮಗಾರಿ ಪೂರ್ಣಗೊಳಿಸಿ, ಆಗಸ್ಟ್ 30ರೊಳಗೆ 75 ಹಳ್ಳಿಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸುವ ಭರವಸೆಯನ್ನು ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ನೀಡಿದರು.
ದೇವರ ಎತ್ತುಗಳು ಹಾಗೂ ಜಾನುವಾರು ರಕ್ಷಣೆ ಟ್ರಸ್ಟ್ ರಚನೆಗೆ ತಾಕೀತು:
ಬರುವ ಆಗಸ್ಟ್ 30ರೊಳಗಾಗಿ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕುಗಳಲ್ಲಿನ ದೇವರ ಎತ್ತುಗಳ ರಕ್ಷಣೆ ಹಾಗೂ ನಿರ್ವಹಣೆಗೆ ಟ್ರಸ್ಟ್‌ಗಳನ್ನು ರಚಿಸುವಂತೆ ಸಚಿವ ಟಿ.ರಘುಮೂರ್ತಿ ತಾಕೀತು ಮಾಡಿದರು.
50ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಒಂದರಂತೆ ಟ್ರಸ್ಟ್ ನೋಂದಣಿ ಮಾಡಿಸಿದರೆ, ಸರ್ಕಾರದಿಂದ ಪ್ರತಿ ಹಸುವಿಗೆ ದಿನಕ್ಕೆ 17 ರೂ. ಸಹಾಯಧನ ಸಿಗಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಸೌಲಭ್ಯ ತಲುಪುತ್ತಿಲ್ಲ. ದೇವರ ಎತ್ತುಗಳ ಟ್ರಸ್ಟ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದರು.
ಹಿರಿಯೂರು ತಾಲೂಕಿನಲ್ಲಿ 28,559 ಕುಟುಂಬಗಳು ಜಾನುವಾರು ಸಾಕಣೆಯನ್ನೇ ನೆಚ್ಚಿಕೊಂಡಿವೆ. ಪ್ರಸ್ತುತ 21 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದ್ದು, ಕೆಎಂಎಫ್‌ನಿಂದ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಇದನ್ನೂ ಓದಿ:
ಅಧಿಕಾರಿಗಳ ಮನೋ ಧೋರಣೆ ಬದಲಾವಣೆ ಸೂಚನೆ:
ಬೆಳಿಗ್ಗೆ 10-30 ರಿಂದ ಸಂಜೆ 5-30 ರವರೆಗೆ ಕಚೇರಿಯಲ್ಲಿ ಕುಳಿತು ಕಾಗದದ ಕೆಲಸ ಮಾಡುವುದಕ್ಕೆ ಅಧಿಕಾರಿಗಳು ಸೀಮಿತವಾಗಬಾರದು. ಆರಾಮವಾಗಿದ್ದು, ಕಾಲಹರಣ ಮಾಡುವ ಮನೋಧೋರಣೆಯನ್ನು ಬದಲಾಯಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು. ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ವೇಗ ದೊರಕಬೇಕು. ಪ್ರತಿ 7 ದಿನಗಳಿಗೊಮ್ಮೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ. ಬರಗಾಲದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ‘ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್’ ಎಂಬಂತೆ ನಿಮ್ಮ ಕಾರ್ಯವೈಖರಿ ಇರಬಾರದು ಎಂದು ಸಚಿವ ಟಿ. ರಘುಮೂರ್ತಿ ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ರಾಮಪ್ಪ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.



