ನಿರಂತರವಾಗಿ ಗೋವುಗಳ ಕಳ್ಳತನ: ಕ್ರಮವಹಿಸದ ಪೊಲೀಸರ ವಿರುದ್ಧ ಆಕ್ರೋಶ

ಹೊಸದಿಗಂತ ವರದಿ, ಮಡಿಕೇರಿ:
ಮಡಿಕೇರಿ ಸಮೀಪದ ಕಡಗದಾಳುವಿನಲ್ಲಿ ನಿರಂತರವಾಗಿ ಗೋವುಗಳ ಕಳ್ಳತನವಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಇಲ್ಲಿಯವರೆಗೆ ದುಷ್ಕರ್ಮಿಗಳನ್ನು ಬಂಧಿಸಿಲ್ಲವೆಂದು ಆರೋಪಿಸಿ ಕಡಗದಾಳು ಗ್ರಾ.ಪಂ ಬಳಿ ಹಿಂದೂ ಜಾಗರಣಾ ವೇದಿಕೆ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಿತು.
ಗೋವುಗಳ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸೆ.8 ರಂದು ರಾತ್ರಿ ಕಡಗದಾಳು ಬೆಳೆಗಾರ ಮುಕ್ಕಾಟಿರ ಅಶೋಕ್ ಎಂಬವರ ಕೊಟ್ಟಿಗೆಯಿಂದ ಎರಡು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಕೆಲವು ತಿಂಗಳುಗಳ ಹಿಂದೆ ದಿನು ಸೋಮಣ್ಣ ಎಂಬವರ ಕೊಟ್ಟಿಗೆಯಿಂದಲೂ ಹಸು ನಾಪತ್ತೆಯಾಗಿದೆ. ಸ್ಥಳೀಯರಾದ ಮುಕ್ಕಾಟಿರ ಮಂಜುಳಾ ಅವರು ಮೇಯಲು ಬಿಟ್ಟದ್ದ ಒಂದು ಹಾಗೂ ಮುಕ್ಕಾಟಿರ ದಿನೇಶ್ ಅವರ 2 ಹಸುಗಳನ್ನು ಹಸುವನ್ನು ಕದ್ದೊಯ್ಯಲಾಗಿದೆ.
ಈ ಎಲ್ಲಾ ಪ್ರಕರಣಗಳ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇಲ್ಲಿವರೆಗೆ ಕಳ್ಳರನ್ನು ಬಂಧಿಸಿಲ್ಲವೆಂದು ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಆರೋಪಿಸಿದರು.
ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಗೋ ಮಾಂಸ ಮಾರಾಟ ಮತ್ತು ಅಕ್ರಮ ಗೋಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಪೊಲೀಸರನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂ.ಜಾ.ವೇ. ಮಂಗಳೂರು ವಿಭಾಗದ ಸಂಯೋಜಕ್ ಮಹೇಶ್, ಮಡಿಕೇರಿ ತಾಲೂಕು ಸಂಯೋಜಕ್ ಮಗೇರನ ಬೆಳ್ಯಪ್ಪ, ಸಹ ಸಂಯೋಜಕ್ ಚೇತನ್ ಹಾಗೂ ಸ್ಥಳೀಯ ಪ್ರಮುಖರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!