ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಬೆಂಗಳೂರು ಮಂದಿ ವರುಣನ ಆರ್ಭಟದಿಂದ ಕಂಗಾಲಾಗಿದ್ದಾರೆ. ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆಗಳು ಕೆರೆಗಳಂತಾಗಿವೆ. ನೀರಿನಲ್ಲಿ ನಿಂತು ವಾಹನಗಳು ಕೈ ಕೊಟ್ಟಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಮೆಜೆಸ್ಟಿಕ್ ಬಳಿಯ ಓಕಳಿಪುರ ಅಂಡರ್ಪಾಸ್ನಲ್ಲಿ ನೀರು ನಿಂತು ನೀರಿನಲ್ಲಿ ಎರಡು ವಾಹನಗಳು ಕೆಟ್ಟುನಿಂತವು. ಪರಿಣಾಮವಾಗಿ ಓಕಳಿಪುರದ ಸುತ್ತಮುತ್ತ ಟ್ರಾಫಿಕ್ಜಾಮ್ ಉಂಟಾಯಿತು. ನಿಧಾನಗತಿಯಲ್ಲಿ ಚಲಿಸುತ್ತಿರುವ ವಾಹನಗಳ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರ ಪರದಾಟಪಟ್ಟರು. ಅಂಡರ್ಪಾಸ್ ಬಳಿ ಟ್ರಾಫಿಕ್ನಲ್ಲಿ ಸಿಲುಕಿ ಆಂಬುಲೆನ್ಸ್ ಕೂಡ ಪರದಾಡುವಂತಾಯಿತು.
ಮುಂಜಾನೆಯಿಂದ ಬಿಟ್ಟೂಬಿಡದೆ ಮಳೆ ಸುರಿದಿದ್ದರಿಂದ ಬೆಳಗ್ಗೆ ಕಚೇರಿ, ಶಾಲೆಗಳಿಗೆ ತೆರಳುವ ಮಕ್ಕಳು ಸಂಕಷ್ಟಕ್ಕೀಡಾದರು. ಒಮ್ಮೆ ಧೋ ಎಂದು ಸುರಿಯುವ ಮಳೆ, ನಂತರ ಜಿಟಿಜಿಟಿ ಜಿನುಗುವ ಮಳೆಯಿಂದ ಬೈಕ್ ಸವಾರರು ಒದ್ದಾಡಿದರು. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಆಗಿ ಸವಾರರಿಗೆ ಸಂಕಷ್ಟ ಎದುರಾಯಿತು.
ಮಳೆ ಆರ್ಭಟಕ್ಕೆ ಯಶವಂತಪುರ, ಗೊರಗುಂಟೆಪಾಳ್ಯ ಸುತ್ತ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತವು. ಕಚೇರಿ, ಶಾಲಾ-ಕಾಲೇಜುಗಳಿಗೆ ಹೋಗುವವರು ಸಂಕಷ್ಟ ಅನುಭವಿಸಿದರು.ಬೆಂಗಳೂರಿನ 8ನೇ ಮೈಲಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. 8ನೇ ಮೈಲಿನಿಂದ ಹೆಸರಘಟ್ಟ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿ ಸವಾರರು ಪರದಾಡಿದರು. ದೇವನಹಳ್ಳಿಯಲ್ಲಿ ಮಳೆಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಿದರು. ದೊಡ್ಡಬಳ್ಳಾಪುರ, ಹೊಸಕೋಟೆ ಭಾಗದಲ್ಲೂ ಜಿಟಿಜಿಟಿ ಮಳೆಯಾಗಿದೆ