ಕೊಲೀಜಿಯಮ್‌ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ- ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಶಕಗಳಿಂದ ರೂಢಿಯಲ್ಲಿರೋ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಕೊಲೀಜಿಯಂ ವ್ಯವಸ್ಥೆಯ ಕುರಿತಾಗಿ ಪ್ರಸ್ತುತ ಶಾಸಕಾಂಗ ಹಾಗು ನ್ಯಾಯಾಂಗದ ನಡುವೆ ತಿಕ್ಕಾಟಗಳು ನಡೆಯುತ್ತಿರುವುದು ಗೊತ್ತೇ ಇದೆ. ಈ ಸಂಬಂಧ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಭಾರತದ ಮುಖ್ಯನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿದ್ದು ನ್ಯಾಯಮೂರ್ತಿಗಳನ್ನು ಶಿಫಾರಸ್ಸು ಮಾಡುವ ಕೊಲೀಜಿಯಂ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಯನ್ನೂ ನೇಮಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಕೊಲಿಜಿಯಂ ಪದ್ಧತಿಯಲ್ಲಿ ಮುಖ್ಯನ್ಯಾಯಮೂರ್ತಿಗಳು, ಹಾಗು ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯು ಮುಖ್ಯ ನ್ಯಾಯಮೂರ್ತಿಗಳನ್ನು ಶಿಫಾರಸ್ಸು ಮಾಡುತ್ತಿತ್ತು. ಆಡಳಿತಾರೂಢ ಸರ್ಕಾರ ಈ ವ್ಯವಸ್ಥೆಯ ಬದಲಾಗಿ ನ್ಯಾಯಾಂಗ ನೇಮಕಾತಿ ಪ್ರಾಧಿಕಾರ(NJAC) ಅನ್ನು ಜಾರಿಗೆ ತರಲು ಯೋಚಿಸಿತ್ತು. ಆದರೆ ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆಯಾಗುತ್ತದೆಯೆಂದು ಸರ್ವೋಚ್ಛ ನ್ಯಾಯಾಲಯವು ಇದನ್ನು ನಿರರ್ಥಕವೆಂದಿತ್ತು. ಇದರ ವಿರುದ್ಧ ಸರ್ಕಾರದ ಕಾನೂನು ಸಚಿವರು, ರಾಜ್ಯ ಸಭೆಯ ಸ್ಪೀಕರ್‌, ಲೋಕಸಭಾ ಸ್ಪೀಕರ್‌ ಧ್ವನಿ ಎತ್ತಿದ್ದರು. ಕಾನೂನು ನಿರ್ಮಿಸುವ ಸಂಸತ್ತಿನ ಅಧಿಕಾರವನ್ನು ನ್ಯಾಯಾಂಗವು ಮೀರಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರಸ್ತುತ ಕಾನೂನು ಸಚಿವರು ಪತ್ರ ಬರೆದಿದ್ದು, ಕೊಲಿಜಿಯಂ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಯನ್ನು ಸೇರ್ಪಡೆಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆಯು ಪಾರದರ್ಶಕವಾಗಿಲ್ಲ ಎಂಬುದು ಸರ್ಕಾರದ ಆರೋಪ. ಇದಕ್ಕೆ ಪೂರಕವೆಂಬಂತೆ ಭಾರತದ ಮಾಜಿ ನ್ಯಾಯಮೂರ್ತಿಗಳಾದ ರುಮಾ ಪಾಲ್ ಅವರು ದಶಕದ ಹಿಂದೆ “ಪ್ರಸ್ತುತ ಚಾಲ್ತಿಯಲ್ಲಿರುವ ಉನ್ನತ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆಯು ಈ ದೇಶದ ಅತ್ಯುತ್ತಮ ರಹಸ್ಯಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.

ಆದರೆ ಈ ಪತ್ರವನ್ನು ಸುಪ್ರಿಂ ಕೋರ್ಟ್‌ ತಳ್ಳಿಹಾಕಿದ್ದು ಇದು ಹಿಂಬಾಗಿಲಿನಿಂದ ನ್ಯಾಯಾಂಗ ನೇಮಕಾತಿ ಪ್ರಾಧಿಕಾರ(NJAC)ವನ್ನು ಜಾರಿಗೆ ತರುವ ಯತ್ನ ಎಂದಿದೆ. ಸಿಜೆಐ ಡಿವೈ ಚಂದ್ರಚೂಡ್‌ ಹಾಗು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಕೆ ಎಂ ಜೋಸೆಫ್, ಎಂ ಆರ್ ಶಾ ಮತ್ತು ಅಜಯ್ ರಸ್ತೋಗಿಯವರನ್ನು ಒಳಗೊಂಡ ಕೊಲಿಜಿಯಂ ಸಮಿತಿಯು ರಿಜಿಜು ಸೂಚಿಸಿದ ಈ ಕಾರ್ಯವಿಧಾನ ತಿದ್ದುಪಡಿಯನ್ನು ( MoP) ತಿರಸ್ಕರಿಸಿದ್ದು ನ್ಯಾಯಾಂಗ ನೇಮಕಾತಿ ಪ್ರಾಧಿಕಾರ(NJAC)ವನ್ನು ಹಿಂಬಾಗಿಲಿನಿಂದ ಜಾರಿಗೆ ತರುವ ಯತ್ನ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!