ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಪಠ್ಯಪುಸ್ತಕದಲ್ಲಿ ಶ್ರೀ ರಾಮಾಯಣ ಹಾಗೂ ಮಹಾಭಾರತ ವಿಷಯಗಳ ಸೇರ್ಪಡೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ( NCERT)ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದರ ಜೊತೆಗೆ ಶಾಲಾ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನು ಬರೆಯುಂತೆ ಶಿಫಾರಸು ಮಾಡಿದೆ.
ಕಳೆದ ವರ್ಷ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಈ ಸಮಿತಿ ಹಲವು ಶಿಫಾರಸು ನೀಡಿದೆ. ಸಮಿತಿ ಶಿಫಾರಸು ಮಾಡಿದ ಅಂಶಗಳನ್ನು 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಹಾಗೂ ಬೋಧನಾ ಕಲಿಕಾ ಸಾಮಾಗ್ರಿ ಸಮಿತಿ ಪರಿಶೀಲನೆ ನಡೆಸಿ ಪರಿಗಣಿಸಲಿದೆ.
ಅದ್ರ ಜೊತೆಗೆ ಶ್ರೀರಾಮಾಯಣ ಹಾಗೂ ಮಹಾಭಾರತ ಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವ ಜೊತೆ ಮೌಲ್ಯಗಳನ್ನು ತಿಳಿಸುವ ಪ್ರಯತ್ನವಾಗಬೇಕು. ಮಕ್ಕಳ ಮೌಲ್ಯಯುತ ಜೀವನಕ್ಕೆ ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಅವಶ್ಯಕವಾಗಿದೆ ಎಂದು ಸಮಿತಿಯ ಮುಖ್ಯಸ್ಥ ಸಿಐ ಐಸಾಕ್ ಹೇಳಿದ್ದಾರೆ.
7 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ದೇಶಭಕ್ತಿ, ದೇಶದ ಬಗ್ಗೆ ಗೌರವ ಹಾಗೂ ಹೆಮ್ಮೆಯನ್ನು ಬೆಳೆಸುವಲ್ಲಿ ಈ ಮಹಾಕಾವ್ಯಗಳು ನೆರವಾಗಲಿದೆ. ಭಾರತೀಯರು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶ, ಸಂಸ್ಕೃತಿ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಐಸಾಕ್ ಹೇಳಿದ್ದಾರೆ.
ಹೊಸ ಪಠ್ಯಕ್ರಮದ ಅನುಸಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಎನ್‌ಸಿಇಆರ್‌ಟಿ ರಚಿಸಿರುವ ಹೊಸ ಸಮಿತಿಯಲ್ಲಿ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ದಕ್ಷಿಣ ಕನ್ನಡ ಮೂಲದ ಸಂಸ್ಕೃತ ಶಿಕ್ಷಣ ತಜ್ಞ ಚಾಮು ಕೃಷ್ಣಶಾಸ್ತ್ರಿ, ಖ್ಯಾತ ಗಾಯಕ ಶಂಕರ್ ಮಹಾದೇವನ್, ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಸೇರಿದಂತೆ ಹಲವು ಗಣ್ಯರಿದ್ದಾರೆ.