ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಕೆಲವೇ ಹೊತ್ತಿನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿ ಬಜೆಟ್ ಬಗ್ಗೆ ಮಧ್ಯಮ ಹಾಗೂ ಬಡ ವರ್ಗದವರಿಗೆ ಸಾಕಷ್ಟು ನಿರೀಕ್ಷೆಗಳಿದ್ದು, ಅವು ಸತ್ಯವಾಗಲಿದೆಯಾ ಕಾದುನೋಡಬೇಕಿದೆ..
ದೇಶದ ಬಡ ಕುಟುಂಬಗಳಿಗೆ ಆರೋಗ್ಯ ವಿಮೆಯನ್ನು ಒದಗಿಸುವ ಉದ್ದೇಶದಿಂದ 2018 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಿಂದ 50 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ದೆಹಲಿ ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ. 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೂ ಇದನ್ನು ವಿಸ್ತರಿಸಲಾಗಿದೆ. ಹಾಗಾಗಿ ಬಜೆಟ್‌ನಲ್ಲಿ ಅನುದಾನ ಹೆಚ್ಚಳವಾಗುವ ಸಾಧ್ಯತೆ ಇದೆ.
ಸೌರಶಕ್ತಿಯನ್ನು ಉತ್ತೇಜಿಸುವ ಕೇಂದ್ರವು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ತಂದಿದೆ. ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆಗಾಗಿ ಈ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ಗರಿಷ್ಠ 3 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಪ್ರತಿ ಮನೆಗೆ 78,000 ರೂ. ನೀಡುವ ಗುರಿ ಹೊಂದಲಾಗಿದೆ. 2026-27ರ ವೇಳೆಗೆ ಒಂದು ಕೋಟಿ ಮನೆಗಳಿಗೆ ಈ ಯೋಜನೆ ಅಡಿ ಸೋಲಾರ್ ಹಾಕುವ ಗುರಿ ಹೊಂದಿದ್ದು, 1.45 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆ ಸಬ್ಸಿಡಿಗಾಗಿ ಬಜೆಟ್‌ನಲ್ಲಿ ಹಂಚಿಕೆ ಹೆಚ್ಚಿಸುವ ಸಾಧ್ಯತೆಯಿದೆ.
ಗ್ರಾಮೀಣ ಬಡವರ ಸ್ವಂತ ಮನೆ ಕನಸು ನನಸು ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 3 ಕೋಟಿ ಮನೆಗಳ ನಿರ್ಮಾಣ ಕೈಗೆತ್ತಿಕೊಂಡಿರುವ ಕೇಂದ್ರ ಎರಡನೇ ಹಂತದಲ್ಲಿ ಎಲ್ಲರಿಗೂ ವಸತಿ ಎಂಬ ಹೆಸರಿನಲ್ಲಿ ನೆರವು ನೀಡಲಿದೆ. 2029ರ ವೇಳೆಗೆ ನಗರ ಪ್ರದೇಶದ ಒಂದು ಕೋಟಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದಕ್ಕಾಗಿ 2.30 ಲಕ್ಷ ಕೋಟಿ ವ್ಯಯಿಸಲಾಗುವುದು.
ಅಸುರಕ್ಷಿತ ಸಾಲಗಳನ್ನು ಒದಗಿಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಏಪ್ರಿಲ್ 8, 2015 ರಂದು ಪ್ರಾರಂಭಿಸಲಾಗಿದೆ. ತರುಣ್ ಅಡಿಯಲ್ಲಿ 10 ಲಕ್ಷದ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬಾರಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೋವಿಡ್ ಸಮಯದಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಗರೀಬ್ ಕಲ್ಯಾಣ್ ಯೋಜನೆಯನ್ನು ಮಾರ್ಚ್ 2020 ರಲ್ಲಿ ಪರಿಚಯಿಸಲಾಯಿತು. ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಮತ್ತು ಗೋಧಿ ನೀಡಲಾಗುತ್ತದೆ. ಕೇಂದ್ರವು ಈ ಯೋಜನೆಯನ್ನು 2028 ರವರೆಗೆ ವಿಸ್ತರಿಸಿದ್ದು, ಈ ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಡುವ ಸಾಧ್ಯತೆಯಿದೆ.
ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು 2018 ರಲ್ಲಿ ಪರಿಚಯಿಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ, ವರ್ಷಕ್ಕೆ ಮೂರು ಕಂತುಗಳಲ್ಲಿ ರೂ.6,000 ನೀಡಲಾಗುತ್ತಿದೆ. ಈ ಬಾರಿ ಈ ಆರ್ಥಿಕ ನೆರವು ಹೆಚ್ಚಿಸುವ ಸಾಧ್ಯತೆ ಇದೆ.