ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ಅಧಿಕ ವಾಹನ ದಟ್ಟಣೆಯನ್ನು ಎದುರಿಸಲು ಮತ್ತು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ದೆಹಲಿ ಮುಖ್ಯಮಂತ್ರಿ ಅತಿಶಿ ಹೊಸ ನಿಯಮವನ್ನು ತಂದಿದ್ದು, ಅದರಂತೆ ಸರ್ಕಾರಿ ಕಚೇರಿಯಲ್ಲಿನ ಕೆಲಸದ ಸಮಯವನ್ನು ಬದಲಾಯಿಸಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ . ಇದರಿಂದ ವಾಹನಗಳಿಂದ ಹರಡುವ ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.
ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಅದಕ್ಕೆ ಸಂಬಂಧಿಸಿದ ಮಾಲಿನ್ಯವನ್ನು ಕಡಿಮೆ ಮಾಡಲು ದೆಹಲಿಯ ಸರ್ಕಾರಿ ಕಚೇರಿಗಳ ಸಮಯವನ್ನು ಬದಲಾಯಿಸಲಾಗುವುದು ಎಂದು ಸಿಎಂ ಅತಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಹೊಸ ಬದಲಾವಣೆ ಪ್ರಕಾರ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗಳ ಸಮಯ ಬೆಳಗ್ಗೆ 8:30 ರಿಂದ ಸಂಜೆ 5 ರವರೆಗೆ, ಕೇಂದ್ರ ಸರ್ಕಾರಿ ಕಚೇರಿಗಳ ಸಮಯ ಬೆಳಗ್ಗೆ 9 ರಿಂದ ಸಂಜೆ 5:30 ರವರೆಗೆ ಮತ್ತು ದೆಹಲಿ ಸರ್ಕಾರಿ ಕಚೇರಿಗಳ ಸಮಯ ಬೆಳಿಗ್ಗೆ 10 ರಿಂದ ಸಂಜೆ 6:30 ರವರೆಗೆ ಇರುತ್ತದೆ ಎಂದು ಹೇಳಿದ್ದಾರೆ.
ಪೀಕ್ ಅವರ್‌ನಲ್ಲಿ ವಾಹನ ಸಂಚಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು (CQM) GRAP-3 ಕ್ರಮಗಳನ್ನು ವಿಧಿಸಿದೆ. ಏಕೆಂದರೆ ರಾಷ್ಟ್ರೀಯ ರಾಜಧಾನಿಯು ದೇಶದಲ್ಲಿ ಮಾಲಿನ್ಯದ ಅತ್ಯಂತ ಕೆಟ್ಟ ಮಟ್ಟವನ್ನು ದಾಖಲಿಸಿದೆ. ಗಾಳಿಯ ಗುಣಮಟ್ಟವು ಸತತ ಎರಡು ದಿನಗಳವರೆಗೆ ತೀವ್ರ ವರ್ಗದಲ್ಲಿ ಉಳಿದಿದೆ.
ದೀಪಾವಳಿಯಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ನಿರಂತರವಾಗಿ ಹೆಚ್ಚುತ್ತಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ದೆಹಲಿಯಲ್ಲಿ ಗ್ರಾಪಂನ ಹಂತ-3 ಅನ್ನು ಜಾರಿಗೊಳಿಸಲಾಗಿದೆ. ಇದನ್ನು ನಿಯಂತ್ರಿಸಲು ಹತ್ತಾರು ನಿಯಮಗಳನ್ನು ಮಾಡಲಾಗಿದೆ. ರಾಜಧಾನಿ ದೆಹಲಿಯಲ್ಲಿ 106 ಹೆಚ್ಚುವರಿ ಕ್ಲಸ್ಟರ್ ಬಸ್‌ಗಳನ್ನು ಓಡಿಸಲು ಅತಿಶಿ ಸರ್ಕಾರ ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ನಿರಂತರ ಕುಸಿತ ದಾಖಲಾಗುತ್ತಿದೆ. ಶುಕ್ರವಾರ (ನವೆಂಬರ್ 15) ವಾಯು ಗುಣಮಟ್ಟ ಸೂಚ್ಯಂಕ 411ಕ್ಕೆ ತಲುಪಿದೆ. ಈ ಸೂಚ್ಯಂಕವು ಗಂಭೀರ ವರ್ಗಕ್ಕೆ ಸೇರುತ್ತದೆ. ಇ-ಬಸ್‌ಗಳು ಮತ್ತು ಸಿಎನ್‌ಜಿ ಚಾಲಿತ ಬಸ್‌ಗಳನ್ನು ಹೊರತುಪಡಿಸಿ ಅಂತರರಾಜ್ಯ ಬಸ್‌ಗಳ ಪ್ರವೇಶವನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ.