Sunday, February 5, 2023

Latest Posts

ಎಥನಾಲ್ ಉತ್ಪಾದನೆ ಹೆಚ್ಚಳ: ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸುವ ಗುರಿಯತ್ತ ಪ್ರಧಾನಿ ಮೋದಿ!

ಹೊಸದಿಗಂತ ವರದಿ,ಹಾವೇರಿ:

ಎಥನಾಲ್ ಉತ್ಪಾದನೆ ಹೆಚ್ಚಿಸುವ ಮೂಲಕ ಭಾರತದ ಕಚ್ಚಾ ತೈಲ ಆಮದನ್ನು ಕಡಿಮೆ ಗೊಳಿಸಿ ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಶಿಗ್ಗಾವ್ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ನೂತನವಾಗಿ ಆರಂಭವಾದ ವಿ.ಐ.ಎನ್.ಪಿ. ಡಿಸ್ಟಿಲರೀಸ್ ಆಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ನ ೩೦೦೦ ಕೆ.ಎಲ್.ಪಿ.ಡಿ. ಎಥನಾಲ್ ಹಾಗೂ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಿ ಮಾತನಾಡಿದರು.
ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವ ಮೂಲಕ ದೇಶದ ಡಾಲರ್‌ನ ಅವಲಂಬನೆಯನ್ನು ಕಡಿಮೆ ಮಾಡಿ ಆರ್ಥಿಕತೆಯನ್ನು ಹೆಚ್ಚಿಸುವುದು ಮತ್ತು ಪರಿಸರ ರಕ್ಷಣೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೃಢವಾದ ಹೆಜ್ಜೆ ಇಡುತ್ತಿದ್ದಾರೆ ಎಂದು ತಿಳಿಸಿದರು.
>> ಎಥನಾಲ್ ಕಾರ್ಖಾನೆ ಸ್ಥಾಪನೆಗೆ ಶೇ.೬ ಬಡ್ಡಿಯಲ್ಲಿ ಸಾಲಸೌಲಭ್ಯ
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಎಥನಾಲ್ ಕಾರ್ಖಾನೆ ಸ್ಥಾಪನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಯಿತು. ಪ್ರಸಕ್ತ ಎಥನಾಲ್ ಕಾರ್ಖಾನೆ ಬಹಳ ಬೇಡಿಕೆಯೂ ಕಂಡುಬರುತ್ತಿದೆ. ಇದರ ಸ್ಥಾಪನೆಗೆ ಶೇ.೬ ಬಡ್ಡಿದರದಲ್ಲಿ ಐದು ವರ್ಷದ ಅವಧಿಯವರೆಗೆ ಸಾಲವನ್ನು ನೀಡಲಾಗುತ್ತಿದೆ ಹಾಗೂ ಶೇ.೯೫ ರಷ್ಟು ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಸಂಗೂರು, ಹಿರೇಕೆರೂರುಗಳಲ್ಲಿ ಎಥನಾಲ್ ಘಟಕಗಳಿದ್ದು ಇನ್ನೂ ಮೂರು ಕಾರ್ಖಾನೆಗಳಿಗೆ ಅರ್ಜಿಗಳು ಬಂದಿವೆ ಇವುಗಳಿಗೂ ಪರವಾನಿಗೆಯನ್ನು ನೀಡಲಿದೆ. ಎಥನಾಲ್ ಕಾರ್ಖಾನೆಗಳಿಂದ ರೈತರ ಅಭ್ಯುದಯ, ಸ್ಥಳೀಯರಿಗೆ ಉದ್ಯೋಗ ಹಾಗೂ ಸರ್ಕಾರಕ್ಕೆ ಆದಾಯಗಳನ್ನು ಕಾಣಬಹುದಾಗಿದೆ ಎಂದರು.
>> ಜೈವಿಕ ಇಂಧನಕ್ಕೆ ಮಹತ್ವ
ನಮ್ಮ ದೇಶದ ಮುಂದಿರುವ ಸವಾಲುಗಳನ್ನು ಹೇಗೆ ಬಗೆಹರಿಸಬೇಕೆಂದು ನಮ್ಮ ಪ್ರಧಾನಮಂತ್ರಿ ದೂರದೃಷ್ಟಿಯಿಂದ ಚಿಂತನೆ ಮಾಡಿದ್ದವರು. ಆರ್ಥಿಕತೆ ಬೆಳೆಯಲು ವಿದ್ಯುತ್ ಉತ್ಪಾದನೆ, ಜೊತೆಗೆ ಪರಿಸರದ ರಕ್ಷಣೆಯೂ ಆಗಬೇಕು. ಜೈವಿಕ ಇಂಧನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದು ತಿಳಿಸಿದರು.
ವಾಜಪೇಯಿ ಅವರ ಕಾಲದಲ್ಲಿ ಎಥನಾಲ್ ಘಟಕ ಪ್ರಾರಂಭ ವಾಯಿತು. ೨೦೨೪ ಕ್ಕೆ ಶೇ.೧೦ ರಷ್ಟು ಗುರಿ ಸಾಧಿಸಬೇಕೆಂದಿತ್ತು. ಆದರೆ ೨೦೨೨ಕ್ಕೇ ಈ ಗುರಿ ಸಾಧಿಸಲಾಗಿದೆ. ೨೦೨೫ಕ್ಕೆ ಶೇ.೨೦ ರಷ್ಟು ಎಥನಾಲ್ ಸೇರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ. ದೇಶದ ಶೇ.೨೦ ರಷ್ಟು ತೈಲ ಆಮದು ಕಡಿಮೆಯಾಗಲಿದೆ. ಆರ್ಥಿಕ ಹೊರೆ ಕಡಿಮೆಯಾಗಿ, ಸ್ವಚ್ಛ ಇಂಧನದ ಉತ್ಪಾದನೆಯೂ ಸಾಧ್ಯವಾಗುತ್ತದೆ. ಇದು ದೂರದೃಷ್ಟಿಯ ನಾಯಕನ ಕೆಲಸ ಎಂದರು.
ಬಹಳಷ್ಟು ತೈಲ ಉತ್ಪಾದಿಸುವ ಸಂಸ್ಥೆಗಳು ಇದನ್ನು ಸ್ವೀಕರಿಸಿರಲಿಲ್ಲ. ದಿಟ್ಟ ನಾಯಕತ್ವದ ವಿಚಾರವಿದ್ದಾಗ ಸಮಸ್ಯೆಗಳು ತಾನೇತಾನಾಗಿ ನಿವಾರಣೆಯಾಗುತ್ತವೆ. ನರೇಂದ್ರ ಮೋದಿಯವರು ಬಂದ ನಂತರ ಇದಕ್ಕೆ ಚಾಲನೆ ದೊರಟು, ಸ್ವಚ್ಛ ಇಂಧನ, ಇಂಧನದ ದಕ್ಷತೆಯೂ ಇದೆ. ಎನ್.ಡಿ.ಎ. ಸರ್ಕಾರ, ಮೋದಿಯವರ ನಾಯಕತ್ವ ಬಂದ ಮೇಲೆ ಇದೆಲ್ಲವೂ ಸಾಧ್ಯವಾಗಿವೆ. ಎಥನಾಲ್ ಘಟಕಕ್ಕೆ ಬೇಡಿಕೆ ಬಹಳ ಇದೆ ಎಂದು ಹೇಳಿದರು.
ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಶಿವರಾಂ ಹೆಬ್ಬಾರ್, ಮುರುಗೇಶ್ ನಿರಾಣಿ, ಆರ್.ಅಶೋಕ್ ಮಾತನಾಡಿದರು. ಬಿ.ಎ.ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಜಿ.ಎಂ.ಸಿದ್ದೇಶ್ವರ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!