ಹೊಸದಿಗಂತ ವರದಿ,ಅಂಕೋಲಾ :
ಶಿರೂರು ಗುಡ್ಡ ಕುಸಿತದಿಂದ ಆಗಿರುವ ಜೀವಹಾನಿಯ ಪರಿಹಾರವನ್ನು ೫ ರಿಂದ ೧೦ ಲಕ್ಷಕ್ಕೆ ಏರಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಭಾನುವಾರ ಉಳುವರೆ ಮತ್ತು ಬೆಳಸೆ ಕಾಳಜಿ ಕೇಂದ್ರದಲ್ಲಿ ಇರುವ ಸಂತ್ರಸ್ಥ ಕುಟುಂಬಗಳಿಗೆ ತಮ್ಮ ಕೈಯಿಂದ ಪರಿಹಾರ ಕಿಟ್ ವಿತರಿಸಿ ಮಾತನಾಡಿದರು.
ಉಳುವರೆಯಂತಹ ಭಾಗದಲ್ಲಿ ನದಿ ನೀರು ಉಕ್ಕಿ ಆಗಿರುವ ಹಾನಿ ಅಂದಾಜಿಗೆ ನಿಲುಕದ್ದು. ೭ ಮನೆಗಳು ಸಂಪೂರ್ಣ ಬಳಿದು ಹೋಗಿದ್ದರೆ, ೪೭ ಮನೆಗಳಲ್ಲಿ ನೀರು ನುಗ್ಗಿದೆ. ಈ ಮನೆಗಳಿಗೆ ಮರಳಿ ಜನ ಹೋಗುವುದೂ ಸಹ ದುಸ್ತರವಾಗಿದೆ. ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮನೆಗೆ ನೀರು ನುಗ್ಗಿದರೆ ತಕ್ಷಣ ೧೦ ಸಾವಿರ ರೂ. ನೀಡಲಾಗುತ್ತಿತ್ತು ಅದನ್ನು ಈಗ ಕಾಂಗ್ರೆಸ್ ಸರ್ಕಾರ ೫ ಸಾವಿರಕ್ಕೆ ಇಳಿಸಿದ್ದು ತಪ್ಪು ಎಂದರು.
ರೂಪಾಲಿ ನಾಯ್ಕರ ಪುತ್ರ ಪರ್ಬತ್, ಬಿಜೆಪಿ ಪ್ರಮುಖರಾದ ಜಗದೀಶ ನಾಯಕ ಮೊಗಟಾ, ಸಂಜಯ ನಾಯ್ಕ, ಚಂದ್ರಕಾಂತ ನಾಯ್ಕ, ನೀಲೇಶ ನಾಯ್ಕ , ಪಂಚಾಯತ್ ಸದಸ್ಯ ಕೃಷ್ಣ ಗೌಡ ಮತ್ತಿತರರು ಇದ್ದರು.