ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿ: ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಕೊಬ್ಬರಿ ಸುರಿದು ಪ್ರತಿಭಟನೆ

ಹೊಸದಿಗಂತ ವರದಿ ಹಾಸನ :

ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ಬೃಹತ್ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಶನಿವಾರ ಜೆಡಿಎಸ್ ವತಿಯಿಂದ ತೆಂಗು ಬೆಳೆಗೆ ಬೆಂಬಲ ನೀಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ನೂರಾರು ಪ್ರತಿಭಟನಕಾರರು ರಸ್ತೆಯಲ್ಲಿ ತೆಂಗಿನಕಾಯಿ ಒಡೆಯುತ್ತ ಹೇಮಾವತಿ ಪ್ರತಿಮೆಯಿಂದ ಎನ್ ಆರ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು. ವಾಹನದಲ್ಲಿ‌ ತಂದ ಕೊಬ್ಬರಿ ಹಾಗೂ ತೆಂಗಿನಕಾಯಿಗಳನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಸುರಿದು, ತೆಂಗು ಬೆಳೆಯ ಬೆಲೆ ಪಾತಳಕ್ಕೆ ಕುಸಿದು ಇಂದು ಬೆಳೆಗಾರು ಸಂಕಷ್ಟದಲ್ಲಿದ್ದಾರೆ. ರೈತರ ಹಿತ ಕಾಪಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

ಮಾಜಿ‌ ಸಚಿವ ಎಚ್.ಡಿ‌ ರೇವಣ್ಣ ಮಾತನಾಡಿ, ಹಾಸನ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹಾಸನ ಜಿಲ್ಲೆಯಾದ್ಯಂತ 1.10.000 ಹೆಕ್ಟೇ‌ರ್ (ಸುಮಾರು 2.50,000 ಎಕರೆ) ಪ್ರದೇಶದಲ್ಲಿ ತೆಂಗು ಬೆಳೆಗೆ ಮಳೆ ಕೊರತೆಯಾಗಿ ಕೀಟಬಾಧೆಯಿಂದಾಗಿ ಇಳುವರಿಯಲ್ಲಿ ಶೇಕಡಾ 50ರಷ್ಟು ನಷ್ಟವುಂಟಾಗಿದೆ. ಅಲ್ಲದೇ ಕೊಬ್ಬರಿ ಬೆಲೆಯಲ್ಲಿ ತೀವ್ರ ಇಳಿಮುಖವಾಗಿ ಜಿಲ್ಲೆಯ ಕೊಬ್ಬರಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ತಲೆದೋರಿದೆ. ರಾಜ್ಯ ಸರ್ಕಾರದ ಚುನಾವಣಾ ಪೂರ್ವದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 15 ಸಾವಿರ ಬೆಂಬಲ ಬೆಲೆಯನ್ನು ಘೋಷಿಸಿ ರೈತರಿಂದ ನೇರವಾಗಿ ಖರೀದಿಸಲಾಗುವುದೆಂದು ಭರವಸೆ ನೀಡಿದ್ದರು. ಆದ್ದರಿಂದ ರೈತರ ಬಳಿ ಕೊಬ್ಬರಿ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ರೂ. 15 ಸಾವಿರಗಳಂತೆ ಬೆಂಬಲ ಬೆಲೆಯನ್ನು ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ಈ ವರ್ಷದಲ್ಲಿ ಅತೀ ಕಡಿಮೆ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸುಮಾರು 1,54,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತಿದ್ದ ರಾಗಿ, ಮುಸುಕಿನ ಜೋಳ, ಭತ್ತ ಇನ್ನಿತರೆ ಕೃಷಿ & ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಹಾಳಾಗಿರುವುದರಿಂದ ಜಿಲ್ಲೆಯ ರೈತರು ಸುಮಾರು 3000 ಕೋಟಿಗಳಿಗೂ ಹೆಚ್ಚು ಆರ್ಥಿಕ ನಷ್ಟಕ್ಕೀಡಾಗಿದ್ದಾರೆ. ಆದರೆ, ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ನಿಯಮಾನುಸಾರ 131 ಕೋಟಿಗಳಷ್ಟು ಬೆಳೆ ನಷ್ಟವಾಗಿರುವುದಾಗಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸುತ್ತಿದ್ದು, ಕೂಡಲೇ ಬೆಳೆ ಪರಿಹಾರ ರೂ. 131 ಕೋಟಿಗಳನ್ನು ಬಿಡುಗಡೆಗೊಳಿಸಬೇಕು. ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಕಾಫಿ, ಏಲಕ್ಕಿ, ಮೆಣಸು, ಹೂ, ತರಕಾರಿ ಮತ್ತಿತರ ಬೆಳೆಗಳು ಸಂಪೂರ್ಣ ಹಾಳಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವದಿಂದ ಬೆಳೆಗಳನ್ನು ಬೆಳೆದ ರೈತರಿಗೆ ಕೂಡಲೇ ಪರಿಹಾರವನ್ನು ನೀಡಬೇಕು.
ರೈತರ ರಾಷ್ಟ್ರೀಕೃತ/ಸಹಕಾರ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ‌ಶಾಸಕರಾದ ಸಿ.ಎನ್‌ ಬಾಲಕೃಷ್ಣ, ಎಚ್.ಪಿ‌‌ ಸ್ವರೂಪ್, ಮಾಜಿ ಶಾಸಕ ಕೆ.ಎಸ್‌ಲಿಂಗೇಶ್, ನಾಗರಾಜು, ಮಂಜೇಗೌಡ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!