ಹೊಸದಿಗಂತ ವರದಿ ಬೆಳಗಾವಿ:
ರಾಜ್ಯ ಸರ್ಕಾರ ಘೋಷಿಸಿರುವ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ಬೆಳಗಾವಿಯಲ್ಲಿ ವಿವಿಧ ವ್ಯಾಪಾರ, ಕೈಗಾರಿಕೆ ಹಾಗೂ ಉದ್ಯಮ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ಉದ್ಯಮಿಗಳ ನಿರ್ಧಾರ ವಿರೋಧಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿದ್ದು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಭವನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ
ನಗರದ ಚನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ವ್ಯಾಪಾರಿಗಳು, ಉದ್ಯಮಿಗಳು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಸಭೆ ನಡೆಸಿದರು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
‘ಉದ್ಯಮಗಳ ಮೇಲೆ ಹೆಚ್ಚುವರಿ ಹೊರೆ’
ಪ್ರತಿಭಟನಾಕಾರರು ಮಾತನಾಡಿ, ಕನಿಷ್ಠ ವೇತನದಲ್ಲಿ ಏಕಾಏಕಿ ಹೆಚ್ಚಳ ಮಾಡುವುದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಭಾರೀ ಆರ್ಥಿಕ ಒತ್ತಡ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಿ ಉದ್ಯಮ ಸ್ನೇಹಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಂತ ಹಂತವಾಗಿ ಹೆಚ್ಚಿಸಿದರೆ ವಿರೋಧವಿಲ್ಲ
ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮನೋಳಿ ಮಾತನಾಡಿ, ಬೆಲೆ ಏರಿಕೆ ಮತ್ತು ಆರ್ಥಿಕ ಒತ್ತಡದಿಂದಲೇ ಉದ್ಯಮಗಳು ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ಒಮ್ಮೆಲೇ ವೇತನ ಹೆಚ್ಚಳ ಜಾರಿಗೊಳಿಸಿದರೆ ಅನೇಕ ಉದ್ಯಮಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು. ಹಂತ ಹಂತವಾಗಿ ವೇತನ ಹೆಚ್ಚಳಕ್ಕೆ ವಿರೋಧವಿಲ್ಲ, ಆದರೆ ಏಕಾಏಕಿ ಹೆಚ್ಚಳದಿಂದ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ತಿಳಿಸಿದರು.
ಇದನ್ನೂ ಓದಿ:
ಪಕ್ಕದ ರಾಜ್ಯಗಳೊಂದಿಗೆ ಹೋಲಿಕೆ
ಕರ್ನಾಟಕದಲ್ಲಿ ಕನಿಷ್ಠ ವೇತನವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿರುವುದು ಸ್ಪರ್ಧಾತ್ಮಕ ಉದ್ಯಮ ವಾತಾವರಣಕ್ಕೆ ಹಿನ್ನಡೆಯಾಗಲಿದೆ. ಪಕ್ಕದ ರಾಜ್ಯಗಳಲ್ಲಿ ವೇತನ ದರ ಕಡಿಮೆಯಿರುವ ಕಾರಣ ರಾಜ್ಯದ ಉದ್ಯಮಗಳಿಗೆ ಹೆಚ್ಚುವರಿ ಸವಾಲು ಎದುರಾಗಬಹುದು ಎಂದು ಉದ್ಯಮಿಗಳು ಅಭಿಪ್ರಾಯಪಟ್ಟರು.
ಸರ್ಕಾರದ ಗಮನಕ್ಕೆ ತರಲು ಡಿಸಿ ಭರವಸೆ
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಉದ್ಯಮಿಗಳ ಬೇಡಿಕೆ ಮತ್ತು ಆತಂಕಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಕಾರ್ಮಿಕ ಹಾಗೂ ಕೈಗಾರಿಕಾ ಇಲಾಖೆಯ ಸಂಬಂಧಿತ ಸಚಿವರೊಂದಿಗೆ ಸಭೆ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.



