ಹೊಸದಿಗಂತ ವರದಿ ಹಾಸನ :
ಜಿಲ್ಲೆಯಲ್ಲಿ ದಿನದಿನ ದಿನಕ್ಕೆ ಕಾಡಾನೆ ಹಾವಳಿ ಮಿತಿಮೀರಿದೆ. ಪ್ರಾಣಿ ಹಾನಿ ಸಾವು ನೋವುಗಳು ಕೂಡ ಹೆಚ್ಚಾಗುತ್ತಿವೆ. ಕಾಡಾನೆ ಸಮಸ್ಯೆ ನಿವಾರಣೆ ಎಲ್ಲರ ಜವಾಬ್ದಾರಿ,ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳೆದ ೧೦ ದಿನಗಳಲ್ಲಿ ಕಾಡಾನೆಗ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಸಾವಿಗೆ ನಾವು ಕೊಡುವ ಪರಿಹಾರ ಶಾಶ್ವತ ಅಲ್ಲ, ಶಾಶ್ವತ ಪರಿಹಾರ ಆಗಬೇಕು. ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಸೇರಿ ಮಾಡಬೇಕು. ಈ ವಿಚಾರದಲ್ಲಿ ಎರಡೂ ಸರ್ಕಾರಗಳ ಜವಾಬ್ದಾರಿ ಇದೆ. ಜನಪ್ರತಿನಿಧಿಗಳು, ಸಚಿವರು ಒಟ್ಟುಗೂಡಿ ಕೆಲಸ ಮಾಡಬೇಕಿದೆ. ಪರಸ್ಪರ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇನೆ. ಆನೆಧಾಮ ನಿರ್ಮಾಣಕ್ಕೆ ಪ್ರಸ್ತಾಪನೆ ಸಿದ್ಧವಾಗಿದೆ. ಇದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಎಷ್ಟು ಅನುದಾನ ನಿಗದಿ ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಕೇಂದ್ರಕ್ಕೂ ಒತ್ತಡ ಹಾಕಲಾಗುವುದು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವಿಚಾರದಲ್ಲಿ ಯಾರೂ ಸಹ ರಾಜಹಕೀಯ ಮಾಡಬಾರದು. ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡಿದರೆ ಖಂಡಿತ ಸಮಸ್ಯೆ ಪರಿಹಾರ ಕಾಣುತ್ತದೆ. ಪಕ್ಷಾತೀತವಾಗಿ ಎಲ್ಲರೂ ಕೇಂದ್ರದ ಬಳಿಗೆ ಹೋಗೋಣ, ಪ್ರಯತ್ನ ಎಲ್ಲರ ಕಡೆಯಿಂದ ಇರಬೇಕು. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.