ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಜನರು ಚಾಕು ಮತ್ತು ಆಯುಧಗಳನ್ನು ಸಾಗಿಸುವುದನ್ನು ತಡೆಯಲು ಇರಿತ ವಿರೋಧಿ ಘಟಕ ಸ್ಥಾಪಿಸುವುದಾಗಿ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಾಸೆ ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ಸಿನ ಕಿಟಕಿಯ ಸೀಟಿಗಾಗಿ ಇಬ್ಬರು ಅಪ್ರಾಪ್ತರು ಜಗಳವಾಡಿ ಪರಸ್ಪರ ಇರಿದುಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಚಿಕ್ಕಮಕ್ಕಳು ಹಗಲು ಹೊತ್ತಿನಲ್ಲಿ ಚಾಕು ಹಾಗೂ ಇತರ ಆಯುಧ ಹಿಡಿದುಕೊಂಡು ತಿರುಗಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇರಿತ ವಿರೋಧಿ ಘಟಕ ಸ್ಥಾಪಿಸಿ 5 ರಿಂದ 6 ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಪ್ರದೇಶಗಳಲ್ಲಿ ಗಸ್ತು ತಿರುಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕಾನೂನಿನೊಂದಿಗೆ ಆಟವಾಡಲು ಪ್ರಯತ್ನಿಸಬೇಡಿ ಎಂದು ಪೋಷಕರಿಗೂ ಬೊರಾಸೆ ಎಚ್ಚರಿಕೆ ನೀಡಿದ್ದಾರೆ.