ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದ ಚಳಿಗಾಲದ ತೀವ್ರತೆ ಕ್ರಿಕೆಟ್‌ಗೆ ಅಡ್ಡಿಯಾದ ಅಪರೂಪದ ಘಟನೆ ಲಕ್ನೋದಲ್ಲಿ ನಡೆದಿದೆ. ಭಾರತ–ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಆಯೋಜಿಸಲು ಸಜ್ಜಾಗಿದ್ದ ಏಕಾನಾ ಕ್ರೀಡಾಂಗಣ, ಸಂಜೆ ವೇಳೆಗೆ ದಟ್ಟ ಮಂಜಿನಿಂದ ಸಂಪೂರ್ಣ ಮುಚ್ಚಿಹೋಗಿತ್ತು. ಗೋಚರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಪಂದ್ಯ ಆರಂಭಕ್ಕೆ ಅವಕಾಶ ನೀಡಲಿಲ್ಲ ಮತ್ತು ಕೊನೆಗೂ ರಾತ್ರಿ 9:30ರ ವೇಳೆಗೆ ಪಂದ್ಯ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದರು. ಟಾಸ್ ಕೂಡ ನಡೆಯದೇ ಒಂದು ಎಸೆತವೂ ಆಗದೆ ಪಂದ್ಯ ಅಂತ್ಯ ಕಂಡಿತು.
ತಲಾ ಐದು ಓವರ್‌ಗಳಾದರೂ ಪಂದ್ಯ ನಡೆಸುವ ಪ್ರಯತ್ನವಾಗಿ ಟಾಸ್ ಅನ್ನು ಆರು ಬಾರಿ ಮುಂದೂಡಲಾಯಿತು. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣಿಸದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಪಂದ್ಯ ರದ್ದುಗೊಂಡಿತು.
ಈ ನಿರ್ಧಾರದಿಂದ ದುಬಾರಿ ಟಿಕೆಟ್ ಖರೀದಿಸಿ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿತು. ಆದರೂ ಬಿಸಿಸಿಐ ನಿಯಮದಂತೆ, ಒಂದೂ ಚೆಂಡು ಎಸೆಯದೇ ಪಂದ್ಯ ರದ್ದಾದರೆ ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಸರಣಿಯ ಸ್ಥಿತಿಗತಿಯಲ್ಲೂ ಈ ರದ್ದಾತಿ ಪರಿಣಾಮ ಬೀರಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2–1 ಅಂತರದಲ್ಲಿ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ ಗೆದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ಭಾರತ ಮತ್ತೆ ಮುನ್ನಡೆ ಪಡೆದಿತ್ತು. ನಾಲ್ಕನೇ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ, ಡಿಸೆಂಬರ್ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಸರಣಿಯ ನಿರ್ಣಾಯಕ ‘ಮಾಡು ಅಥವಾ ಮಡಿ’ ಪಂದ್ಯವಾಗಲಿದೆ.

