ಏಳನೇ ವೇತನ ಆಯೋಗ ಅನುಷ್ಠಾನ ಆಗುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ

ಹೊಸದಿಗಂತ ವರದಿ ಶಿವಮೊಗ್ಗ:

7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನ ಕುರಿತು ಸರ್ಕಾರಿ ಆದೇಶ ಹೊರಡಿಸಿದರೆ ಮಾತ್ರ ಈಗಾಗಲೇ ಕರೆ ನೀಡಿರುವ ಮುಷ್ಕರ ವಾಪಸ್ ಪಡೆಯಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.

ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದಿನಿಂದಲೂ 7 ನೇ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಒತ್ತಾಯಿಸುತ್ತಲೇ ಬರಲಾಗಿದೆ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ. ಹಾಗಾಗಿ ಅನಿವಾರ್ಯವಾಗಿ ಮಾರ್ಚ್ 01 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಿ ನೌಕರರು ಅನಿರ್ದಿಷ್ಟಾವ ಮುಷ್ಕರ ನಡೆಸಲಿದ್ದೇವೆ ಎಂದರು.

ಈಗಾಗಲೇ ೆಬ್ರವರಿ 21 ರಂದು ಬೆಂಗಳೂರಿನಲ್ಲಿ 200 ವೃಂದ ಸಂಘಗಳು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರ ಸಂಘಟನೆಗಳ 5000 ಕ್ಕೂ ಹೆಚ್ಚು ಪ್ರತಿನಿಗಳು ಸೇರಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸರ್ವ ಸಮ್ಮತವಾಗಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ವಿಧಾನಸೌಧದವರೆಗೆ ಎಲ್ಲಾ ಸೇವೆಗಳಿಗೂ ಗೈರು ಹಾಜರಾಗಲಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಳೂ ಲಭ್ಯ ಇರುವುದಿಲ್ಲ ಎಂದು ತಿಳಿಸಿದರು.

ಎರಡು ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಸರ್ಕಾರದ ಮುಂದೆ ಇಡಲಾಗಿದೆ. 01-07-2022 ರಿಂದ ಜಾರಿಗೆ ಬರುವಂತೆ ಶೇ.40 ರಷ್ಟು ವೇತನ ಹೆಚ್ಚಳ ಸೌಲಭ್ಯ ಒದಗಿಸಬೇಕು. ಎನ್‌ಪಿಎಸ್ ರದ್ದು ಮಾಡಿ, ಓಪಿಎಸ್ ಜಾರಿಗೆ ತರಬೇಕು. ಈ ಸೌಲಭ್ಯದ ಬಗ್ಗೆ ಸರ್ಕಾರದ ಆದೇಶ ಹೊರಡಿಸಬೇಕು ಎಂದರು.
ಪ್ರಮುಖರಾದ ಮೋಹನ್‌ಕುಮಾರ್, ಮಾರುತಿ, ಸಿದ್ದಪ್ಪ, ರವಿ, ಅರುಣ್‌ಕುಮಾರ್ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!