ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿದೆ ‘ಮಿರ್ಜಾನ ಕೋಟೆ’

ಹೊಸದಿಗಂತ ವರದಿ, ಅಂಕೋಲಾ:

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಮಿರ್ಜಾನ ಕೋಟೆ ಕೇಸರಿ,ಬಿಳಿ, ಹಸಿರು ಬಣ್ಣದ ವಿಶೇಷ ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿದೆ.
ಪುರಾತತ್ವ ಇಲಾಖೆ ವತಿಯಿಂದ ನಿರ್ವಹಿಸಲ್ಪಡುವ ಕುಮಟಾ ಸಮೀಪದ ಮಿರ್ಜಾನ ಕೋಟೆಗೆ ಸ್ವಾತಂತ್ರ್ಯದ 75 ರ ಸಂಭ್ರಮದ ವಿಶೇಷ ಆಕರ್ಷಣೆಯಾಗಿ ಮಾಡಲಾದ ತ್ರಿವರ್ಣಾಲಂಕಾರ ಜನ ಮನ ಸೆಳೆಯತೊಗಿದೆ.
ಅಗಸ್ಟ್ 15 ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ದಿನದ ವರೆಗೆ ಪ್ರತಿ ದಿನ ಸಂಜೆ 6ರಿಂದ ರಾತ್ರಿ 11ರ ವರೆಗೆ ಕೋಟೆಯ ಮೇಲೆ ತ್ರಿವರ್ಣ ಬೆಳಕಿನ ಸೊಬಗನ್ನು ಕಾಣಬಹುದಾಗಿದೆ.
ಮಿರ್ಜಾನ ಕೋಟೆ ಸುಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದ್ದು ರಾಜ್ಯದ ಇತಿಹಾಸದಲ್ಲಿ ಕಾಳು ಮೆಣಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಸಾಳವ ವಂಶದ ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿ 16 ನೇ ಶತಮಾನದಲ್ಲಿ ಈ ಕೋಟೆಯನ್ನು ನಿರ್ಮಿಸಿದ್ದು ರಾಣಿಯ ಆಳ್ವಿಕೆ ಅವಧಿಯಲ್ಲಿ ಈ ಪ್ರದೇಶದಿಂದ ಕಾಳು ಮೆಣಸು ಸೇರಿದಂತೆ ವಿವಿಧ ಸಾಂಬಾರು ಪದಾರ್ಥಗಳನ್ನು ಈ ಪ್ರದೇಶದಿಂದ ವಿದೇಶಗಳಿಗೆ ರಪ್ತು ಮಾಡಲಾಗುತ್ತಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ಪುರಾತತ್ವ ಇಲಾಖೆ ವತಿಯಿಂದ ಮಿರ್ಜಾನ ಕೋಟೆಯನ್ನು ನವೀಕರಣಗೊಳಿಸಿ ಒಂದು ಸುಂದರ ಪ್ರವಾಸಿ ತಾಣದ ರೂಪ ನೀಡಿದ ನಂತರದ ದಿನಗಳಲ್ಲಿ ಕೋಟೆಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚತೊಡಗಿದೆ
ಕೆಲವು ಚಲನಚಿತ್ರಗಳ ಚಿತ್ರೀಕರಣವೂ ಮಿರ್ಜಾನ ಕೋಟೆ ಪರಿಸರದಲ್ಲಿ ನಡೆದಿದೆ.
ಇದೀಗ ರಾಷ್ಟ್ರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ ಮಿರ್ಜಾನ ಕೋಟೆಯ ಮೇಲಿನದೀಪಾಲಂಕಾರ
ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗುವ ಜೊತೆಗೆ ಅಮೃತ ಮಹೋತ್ಸವ ಸಂಭ್ರಮವನ್ನು ಹೆಚ್ಚಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!