Friday, November 14, 2025

India A vs South Africa A | ರುತುರಾಜ್ ಶತಕ: ಭಾರತ ತಂಡಕ್ಕೆ ರೋಚಕ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಿನ್ನೆ ಆರಂಭವಾದ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ನಡುವಿನ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಭಾರತ ತಂಡ ಗೆದ್ದುಕೊಂಡಿದೆ. ಇಂದಿನಿಂದ ಆರಂಭಗೊಳ್ಳುವ ಭಾರತ–ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ನಡೆದ ಈ ಏಕದಿನ ಸರಣಿಯು ಯುವ ಭಾರತ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಎ ತಂಡವು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 53 ರನ್‌ಗಳ ಒಳಗಾಗಿ ಐದು ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ಒತ್ತಡ ಹೆಚ್ಚಾಗಿದ್ದರೂ ಮಧ್ಯ ಕ್ರಮದ ಡಯೇನ್ ಫಾರೆಸ್ಟರ್, ಡೆಲಾನೊ ಪೊಟ್ಗೀಟರ್ ಮತ್ತು ಬ್ಜಾರ್ನ್ ಫೋರ್ಟುಯಿನ್ ಆಟದ ದಿಕ್ಕನ್ನು ಬದಲಿಸಿದರು. ತಲಾ ಅರ್ಧಶತಕ ಬಾರಿಸಿದ ಈ ಮೂವರು ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಅವರ ಶ್ರಮದಿಂದ ಆಫ್ರಿಕಾ ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್ ಕಟ್ಟಿತು. ಭಾರತೀಯ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ನಿಶಾಂತ್ ಸಿಂಧು, ರಿಯಾನ್ ಪರಾಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಕಿತ್ತರು.

286 ರನ್‌ಗಳ ಗುರಿ ಬೆನ್ನಟ್ಟಲು ಬಂದ ಭಾರತ ಎ ತಂಡಕ್ಕೂ ಆರಂಭ ಸುಗಮವಾಗಲಿಲ್ಲ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ರಿಯಾನ್ ಪರಾಗ್ ತ್ವರಿತವಾಗಿ ಔಟಾಗಿದ್ದರಿಂದ ಒತ್ತಡ ಹುಟ್ಟಿತು. ನಾಯಕ ತಿಲಕ್ ವರ್ಮಾ 39 ರನ್‌ಗಳ ಇನ್ನಿಂಗ್ಸ್‌ ನೀಡಿದರೂ ವೇಗದ ಕೊರತೆ ತಂಡಕ್ಕೆ ತಲೆನೋವು ತಂದಿತು. ಇದೇ ವೇಳೆ ರುತುರಾಜ್ ಗಾಯಕ್ವಾಡ್ ಮಿಡಲ್‌ಆರ್ಡರ್‌ನಲ್ಲಿ ನಿಂತು ಏಕಾಂಗಿ ಹೋರಾಟ ನಡೆಸಿ ಭರ್ಜರಿ ಶತಕ ಬಾರಿಸಿದರು. 117 ರನ್‌ಗಳ ಅವರ ಇನ್ನಿಂಗ್ಸ್ ಗೆಲುವಿನ ನೆಲೆಯಾಯಿತು.

ಇನ್ನು ಅಂತಿಮ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ನಿಶಾಂತ್ ಸಿಂಧು ತೋರಿಸಿದ ಸ್ಥಿರತೆ ಮತ್ತು ಧೈರ್ಯ ಭಾರತಕ್ಕೆ ಜಯದ ಬಾಗಿಲು ತೆರೆಯಿತು. 49.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಭಾರತ ಗುರಿ ತಲುಪಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈಗ ಸರಣಿಯ ಎರಡನೇ ಪಂದ್ಯವು ನವೆಂಬರ್ 16 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

error: Content is protected !!