ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯಗಳ ವೇಳೆ ಭಾರತದ ತಟಸ್ಥ ನಿಲುವು ನಿರಾಶಾದಾಯಕ; ಅಮೆರಿಕಾ ಸೆನೆಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾ ಉಕ್ರೇನ್‌ ನಡುವಿನ ಕದನ ಮುಂದುವರೆದಿದೆ. ಈ ನಿಟ್ಟಿನಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ರಷ್ಯಾ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿವೆ. ವಿಶ್ವಸಂಸ್ಥೆಯಲ್ಲಿಯೂ ರಷ್ಯಾ ವಿರುದ್ಧ ಕಠಿಣ ನಿರ್ಣಯಗಳನ್ನು ಅಂಗೀಕರಿಸಲಾಗುತ್ತಿದೆ. ಆದರೆ ಭಾರತ ಮಾತ್ರ ರಷ್ಯಾ ವಿರುದ್ಧ ಕಠಿಣ ನಿಲುವುಗಳನ್ನು ಪ್ರದರ್ಶಿಸುವಲ್ಲಿ ಹಿಂಜರಿಯುತ್ತಿರುವುದು ತಮಗೆ ತೀವ್ರ ನಿರಾಶೆ ತಂದಿದೆ ಎಂದು ಅಮೆರಿಕಾದ ಸೆನೆಟರ್‌ ಒಬ್ಬರು ಹೇಳಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿಯೋಗದಿಂದ ರಷ್ಯಾವನ್ನು ಹೊರಗಿಡುವ ಸಂಬಂಧ ನಡೆದ ಮತದಾನದಿಂದ ಭಾರತ ಹೊರಗುಳಿದಿರುವುದು ನಿರಾಶಾದಾಯಕ ಬೆಳವಣಿಗೆ ಎಂದು ಅಮೆರಿಕಾದ ಕಾಂಗ್ರೆಸ್‌ ಸದಸ್ಯ ಬ್ರಿಯಾನ್‌ ಫಿಟ್ಜ್‌ ಪ್ಯಾಟ್ರಿಕ್‌ ಎಂಬುವವರು ಖಾಸಗಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಾನು ಭಾರತದ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಅವರನ್ನು ಭೇಟಿ ಮಾಡಿ ಭಾರತದ ನಡೆಗೆ ಬೇಸರ ವ್ಯಕ್ತಪಡಿಸಿರುವುದಾಗಿ ಪ್ಯಾಟ್ರಿಕ್‌ ಹೇಳಿದ್ದಾರೆ.
ಅಷ್ಟೇ ಅಲ್ಲ ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ತುರ್ತಾಗಿ ಮಾನವ ಹಕ್ಕುಗಳ ಮಂಡಳಿಯಲ್ಲಿ ಸ್ವತಂತ್ರ್ಯ ಅಂತರಾಷ್ರ್ಟೀಯ ತನಿಖಾ ಆಯೋಗ ಸ್ಥಾಪಿಸಲು ವೋಟಿಂಗ್‌ ಹಮ್ಮಿಕೊಂಡಿತ್ತು. ಆ ವೋಟಿಂಗ್‌ನಿಂದಲೂ ಭಾರತ ದೂರ ಉಳಿದಿತ್ತು. ಇದರ ಜೊತೆಗೆ 15ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ ಸಹ ಉಕ್ರೇನ್‌ ಕುರಿತು ಕೈಗೊಂಡ ನಿರ್ಣಯಗಳ ಸಭೆಯಲ್ಲಿ ಭಾರತ ಗೈರುಹಾಜರಾಗಿತ್ತು ಎಂದು ಅಮೆರಿಕಾ ಸೆನೆಟರ್‌ ಬೇಸರ ಹೊರಹಾಕಿದರು.
ರಷ್ಯಾಗೆ ತೈಲ ನಿರ್ಬಂಧ ಮಾಡುವುದರ ಬಗ್ಗೆ ಜರ್ಮನಿ ಸಹ ಮೌನ ವಹಿಸಿದೆ ಎಂದು ಅವರು ಹೇಳಿದರು. ಮೊದಲಿಗೆ ನಾವು ಮಾಡಬೇಕಿರುವ ಕೆಲಸ ಬಾಕಿಯಿದೆ. ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾ ಸರ್ಕಾರವನ್ನು ಈ ಎಲ್ಲಾ ಘಟನೆಗಳಿಗೂ ಹೊಣೆಗಾರರನ್ನಾಗಿ ಮಾಡುವುದು. ರಷ್ಯಾ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ಹೆಚ್ಚಿಸಿ ಪುಟಿನ್‌ ಸಾಮರ್ಥ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಬೇಕಿದೆ. ಅದನ್ನು ಶೀಘ್ರದಲ್ಲೇ ಮಾಡುವುದಾಗಿ ಪ್ಯಾಟ್ರಿಕ್‌ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!