ಭಾರತ-ಚೀನಾ ಸೇನಾ ಘರ್ಷಣೆ ಕುರಿತು ಇಂದು ಸಂಸತ್ತಿನಲ್ಲಿ ನಿರ್ಣಯ ಮಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆ ಕುರಿತು ಇಂದು ಸಂಸತ್ತಿನಲ್ಲಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ. ಈ ತಿಂಗಳ 9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದ ವಿಚಾರ ತಡವಾಗಿ ತಿಳಿದು ಬಂದಿದೆ. ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿರೋಧ ಪಕ್ಷಗಳು ಆಕ್ರೋಶಗೊಂಡಿದ್ದು, ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ಸಿದ್ಧ ಎಂದಿವೆ.

ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರು ಮುಂದೂಡಿಕೆ ನಿರ್ಣಯ ಮಂಡಿಸಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ನಡೆದ ಘರ್ಷಣೆಯ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಅಸಾದುದ್ದೀನ್ ಓವೈಸಿ ನಿನ್ನೆ ಟ್ವೀಟ್‌ ಮಾಡಿದ್ದಾರೆ.

ಚೀನೀ ಸೈನಿಕರು ತವಾಂಗ್ ಸೆಕ್ಟರ್‌ನಲ್ಲಿ LAC ಅನ್ನು ದಾಟಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದ ನಂತರ ಭಾರತೀಯ ಸೇನೆ ಅವರನ್ನು ತಡೆದಿದೆ. ಈ ವೇಳೆ ಘರ್ಷಣೆಯುಂಟಾಗಿ ಭಾರತೀಯ-ಚೀನೀ ಎರಡು ಕಡೆಯ ಸೈನಿಕರು ಗಾಯಗೊಂಡಿದ್ದಾರೆ. 2020 ರಲ್ಲಿ, ಗಾಲ್ವಾನ್‌ನಲ್ಲಿ ಇದೇ ರೀತಿಯ ಘಟನೆ ನಡೆದು ಕೋಲಾಹಲ ಭುಗಿಲೆದ್ದಿತು. ಆ ನಂತರ ನಡೆದ ಮೊದಲ ಘರ್ಷಣೆ ಇದಾಗಿದೆ.

ಈ ಘಟನೆ ಬಳಿಕ ಭಾರತೀಯ ಕಮಾಂಡರ್ ಚೀನಾದ ಕಮಾಂಡರ್ ಜೊತೆ ಮಾತುಕತೆ ನಡೆಸಿದರು. ಬಳಿಕ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆಯ ವಾತಾವರಣ ತಣ್ಣಗಾಯಿತು. ಈ ವಿಚಾರವಾಗಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ವಿರೋಧಿಸುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರ ಘರ್ಷಣೆಯ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!