ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆ ಬಹುತೇಕ ಮುಗಿದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿಮೆ ಅನಾವರಣಗೊಳಿಸಿದರು.ಈ ವೇಳೆ ಎಲ್‌ಎಸಿ ಉದ್ದಕ್ಕೂ ಇರುವ ಕೆಲವು ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಮಾತುಕತೆಯ ಪರಿಣಾಮವಾಗಿ ಎರಡೂ ದೇಶಗಳಲ್ಲೂ ಒಮ್ಮತ ಮೂಡಿದೆ. ಈ ಹೊಂದಾಣಿಕೆಯ ಆಧಾರದ ಮೇಲೆ ಗಸ್ತು ತಿರುಗುವ ಬಗ್ಗೆ ಇರುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅದಕ್ಕಾಗಿ ನಾವು ಸ್ವಲ್ಪ ಸಮಯ ಕಾಯಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.
1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ 560 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಏಕೀಕರಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರತಿಮೆಯು ಜನರಿಗೆ ಏಕತೆಯ ಶಕ್ತಿ ಮತ್ತು ರಾಷ್ಟ್ರವನ್ನು ನಿರ್ಮಿಸಲು ಅಗತ್ಯವಾದ ಅಚಲವಾದ ಮನೋಭಾವವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೇಜರ್ ಬಾಬ್ ಖಥಿಂಗ್ ಅವರಿಗೆ ಗೌರವ ಸಲ್ಲಿಸಿ, ಅವರ ಈಶಾನ್ಯ ಪ್ರದೇಶ ಮತ್ತು ರಾಷ್ಟ್ರೀಯ ಭದ್ರತೆಗೆ ನೀಡಿದ ಕೊಡುಗೆಗಳನ್ನು ನೆನೆದರು. ಖಾಥಿಂಗ್ ಅವರು ಭಾರತದ ಜೊತೆ ತವಾಂಗ್‌ನ್ನು ಏಕೀಕರಣಕ್ಕೆ ಕಾರಣರಾದರು. ಇಷ್ಟೇ ಅಲ್ಲದೇ ಸಶಸ್ತ್ರ ಸೀಮಾ ಬಾಲ್, ನಾಗಾಲ್ಯಾಂಡ್ ಸಶಸ್ತ್ರ ಪೊಲೀಸ್ ಮತ್ತು ನಾಗಾ ರೆಜಿಮೆಂಟ್ ಸೇರಿದಂತೆ ಅಗತ್ಯ ಮಿಲಿಟರಿ ಭದ್ರತಾ ಪಡೆಗಳನ್ನು ಸ್ಥಾಪಿಸಿದರು. ಅವರ ಶೌರ್ಯ ಮತ್ತು ದೂರದೃಷ್ಟಿ, ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.