ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಯಾಗಿದ್ದು, ಭಾರತ ತನ್ನದೇ ಆದ ಷರತ್ತುಗಳ ಮೇಲೆ ಕದನ ವಿರಾಮವನ್ನು ಜಾರಿಗೆ ಸಮ್ಮತಿಸಿದೆ ಎಂದು ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಇದಾದ ಬಳಿಕ ಮೂರು ಸೇನಾಪಡೆಗಳ ಅಧಿಕಾರಿಗಳಾದ ಕಮೋಡೋರ್ ರಘು ಆರ್ ನಾಯರ್, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಪಾಕಿಸ್ತಾನ ತನ್ನ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಸುಳ್ಳು ಹೇಳಿದೆ. ನಮ್ಮದು ನಿಖರ ದಾಳಿ ಮತ್ತು ಜವಾಬ್ದಾರಿಯುತವಾದ ಕ್ರಮವಾಗಿತ್ತು. ಭಾರತೀಯ ಸೇನೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾತನಾಡಿ, ಬ್ರಹ್ಮೋಸ್ ನೆಲೆಗೆ ಹಾನಿಯಾಗಿದೆ ಎಂಬ ಸುಳ್ಳು ಸುದ್ದಿಯನ್ನು ಪಾಕಿಸ್ತಾನ ಹರಡಿದೆ. ಇದು ಸಂಪೂರ್ಣವಾಗಿ ಸುಳ್ಳು. ನಾವು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ. ಭಾರತೀಯ ಸೇನೆ ಭದ್ರತೆ ಒದಗಿಸುವ ಸಾಮರ್ಥ್ಯವನನ್ನು ಹೊಂದಿದೆ. ನಾವು ಯಾವುದೇ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡಿಲ್ಲ. ಪಾಕಿಸ್ತಾನದ ಅನೇಕ ಏರ್‌ಬಸ್‌ಗಳು ಹಾನಿಗೊಳಗಾಗಿವೆ ಎಂದು ಖಚಿತಪಡಿಸಿದರು.