ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದು ಮೊದಲಿನ ಭಾರತವಲ್ಲ, ಈಗ ಬದಲಾಗಿದೆ. ಹೊರಗೆ ಮಾತ್ರವಲ್ಲ ಇಂದು ಒಳಗೆ ಬಂದೂ ಕೊಲ್ಲಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪಾಕ್ ಗೆ ಎಚ್ಚರಿಕೆ ನೀಡಿದ್ದಾರೆ.
ಛತ್ತೀಸ್‍ಗಢದ (Chhattisgarh) ಮಾವೋವಾದಿಗಳ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಮ್ಮನ್ನು ಪ್ರಚೋದನೆ ಮಾಡಲು ಪ್ರಯತ್ನಿಸಬೇಡಿ ಎಂದು ನಮ್ಮ ನೆರೆಹೊರೆಯವರಿಗೆ ಹೇಳಲು ಬಯಸುತ್ತೇನೆ. ಯಾಕಂದರೆ ಭಾರತ ಬದಲಾಗಿದೆ. ಇದೀಗ ನಾವು ಹೊರಗಿನಿಂದ ಮಾತ್ರವಲ್ಲ ಗಡಿ ದಾಟಿ ಒಳಗಡೆ ಬಂದು ಕೂಡ ಕೊಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಯಾರಾದರೂ ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಪಾಕ್‍ಗೆ ಸಿಂಗ್ ಖಡಕ್ ಎಚ್ಚರಿಕೆ ನೀಡಿದರು.
2016ರ ಉರಿ (Uri Attack) ಹಾಗೂ 2019ರ ಪುಲ್ವಾಮಾದಲ್ಲಿ (Pulwama Attack) ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಪಾಕಿಸ್ತಾನದ ಭಯೋತ್ಪಾದಕರು ಭಾರತದೊಳಗೆ ನುಗ್ಗಿ ನಮ್ಮ ಯೋಧರ ಮೇಲೆ ದಾಳಿ ಮಾಡಿದ್ದರು. ಪರಿಣಾಮ ಹಲವು ಮಂದಿ ಯೋಧರು ಹುತಾತ್ಮರಾಗಿದ್ದರು. ಆಗ ನಾನು ಗೃಹ ಸಚಿವನಾಗಿದ್ದೆ. ಕೂಡಲೇ ಪ್ರಧಾನಿ ದೆಹಲಿಯಲ್ಲಿ ಸಭೆ ನಡೆಸಿ 10 ನಿಮಿಷಗಳಲ್ಲಿ ನಿರ್ಧಾರ ಕೈಗೊಂಡರು. ನಮ್ಮ ಸೇನೆಯ ಯೋಧರು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾದರು ಎಂದರು.
ಒಂಬತ್ತು ವರ್ಷಗಳ ಪ್ರಧಾನಿ ಮೋದಿಯವರ ಪರಿಣಾಮಕಾರಿ ಆಡಳಿತದಿಂದ ಛತ್ತೀಸ್‌ಗಢದಲ್ಲಿ ಎಡಪಂಥೀಯ ಉಗ್ರವಾದದ ಪ್ರಭಾವ ಕುಸಿದಿದೆ. ಛತ್ತೀಸ್‍ಗಢದ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಸಹಕರಿಸಿದ್ದರೆ ಎಡಪಂಥೀಯ ಉಗ್ರವಾದವನ್ನು (LWE) ದೇಶದಿಂದ ನಿರ್ನಾಮ ಮಾಡಬಹುದಿತ್ತು. ರಾಜ್ಯದಲ್ಲಿ ಬಲವಂತದ ಮತಾಂತರಗಳು ಹೆಚ್ಚುತ್ತಿವೆ .ಬಲವಂತದ ಮತಾಂತರವನ್ನು ತಡೆಯಲು ಕಾಂಗ್ರೆಸ್ ಸರಕಾರ ಕ್ರಮಕೈಗೊಳ್ಳಬೇಕು, ಅಗತ್ಯಬಿದ್ದರೆ ಈ ವಿಷಯದಲ್ಲಿ ರಾಜ್ಯಕ್ಕೆ ಕೇಂದ್ರ ಬೆಂಬಲ ನೀಡಲಿದೆ ಎಂದು ಹೇಳಿದರು.