ಇತರರ ಓಲೈಕೆ ಬೇಕಿಲ್ಲ ಭಾರತಕ್ಕೆ ತನ್ನದೇ ಗುರುತಿದೆ: ಎಸ್.‌ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

“ಭಾರತವು ಹಿಂದೆ ಹೇಗೆ ಗುರುತಿಸಲ್ಪಟ್ಟಿತ್ತು ಎನ್ನುವುದಕ್ಕಿಂತ ಭಾರತ ಈಗ ಹೇಗಿದಿಯೋ ಹಾಗೇ ಜಗತ್ತಿನೊಂದಿಗೆ ಮುಂದುವರೆಯಲು ಬಯಸುವುದು ಉತ್ತಮ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ. ರೈಸೀನಾ ಹಿಲ್‌ ನಲ್ಲಿ ನಡೆಯುತ್ತಿರುವ ಜಾಗತಿಕ ರಾಜಕೀಯಗಳಕುರಿತಾಗಿ ನಡೆಯುತ್ತಿರುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ಭಾರತದ ವಿದೇಶಾಂಗ ನೀತಿಗಳು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದರ ಕುರಿತು ಹೇಳಿದ್ದಾರೆ.

“ಇತರರು ಹೇಗೆ ಇದ್ದಾರೆ ಎಂಬ ಆಧಾರದ ಮೇಲೆ ಅವರನ್ನು ಓಲೈಕೆ ಮಾಡುವ ಬದಲು ಭಾರತವು ತನ್ನದೇ ಆದ ಗುರುತಿನ ಮೂಲಕ ಇತರ ದೇಶಗಳೊಂದಿಗೆ ತೊಡಗಿಸಿಕೊಳ್ಳುವ ಅಗತ್ಯವಿದೆ” ಎನ್ನುವ ಮೂಲಕ ಪ್ರಸ್ತುತ ಜಾಗತಿಕ ರಾಜಕೀಯದ ಕುರಿತು ಭಾರತದ ನಿಲುವು ಹೇಗಿರಬೇಕು ಎಂದು ಸ್ಪಷ್ಟಪಡಿಸಿರುವ ಅವರು “ಇತರರು ಭಾರತವನ್ನು ಹೇಗೆ ಅರ್ಥೈಸುತ್ತಾರೆ ಎಂಬ ಆಧಾರದ ಮೇಲೆ ತನ್ನ ನಿಲುವುಗಳಿಗೆ ಇನ್ನೊಬ್ಬರ ಅನುಮೋದನೆಯನ್ನು ಪಡೆಯುವ ಅಗತ್ಯವೀಗ ಭಾರತಕ್ಕಿಲ್ಲ, ಆ ಕಾಲವೀಗ ಕಳೆದು ಹೋಗಿದೆ” ಎಂದಿದ್ದಾರೆ.

ಇನ್ನು ಉಕ್ರೇನ್‌ ಸಂಘರ್ಷದ ಬಗ್ಗೆ ಉಲ್ಲೇಖಿಸಿ “ಭಾರತವು ಯಾರ ಪರವನ್ನೂ ವಹಿಸಿಲ್ಲ, ಬದಲಾಗಿ ತನ್ನ ಸ್ವಂತ ನಿಲುವು ತಳೆದಿದೆ” ಎಂದು ಹೇಳುವ ಮೂಲಕ ಇತರರ ಅನುಮೋದನೆ ಪಡೆಯುವ ಕಾಲ ಕಳೆದು ಹೋಗಿದೆ ಎಂದು ಪುನರುಚ್ಚರಿಸಿದ್ಧಾರೆ. ಇನ್ನು ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನನ್ನು ಹೇಗೆ ನೋಡಲು ಬಯಸುತ್ತದೆ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ. “ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವಾಗ ಹಿಂದೆ ಏನಾಯಿತು ಎಂಬುದರ ಕುರಿತು ಚಿಂತಿಸುವುದಕ್ಕಿಂತ ಮುಂದಿನ 25 ವರ್ಷಗಳ ಕಾಲ ಏನೇನು ಮಾಡಬೇಕು ಎಂಬುದರ ಕುರಿತಾಗಿ ಆಲೋಚಿಸಬೇಕಾಗಿದೆ. ನಮ್ಮ ಸಾಮಾಜಿಕ ಸ್ಥಿತಿಗತಿಗಳ ಕುರಿತು ಚಿಂತಿಸುವುದು, ಉತ್ಪಾದನೆಯನ್ನು ಹೆಚ್ಚಿಸುವುದು, ವಿದೇಶಾಂಗ ನೀತಿಗಳ ವಿಷಯ ಬಂದಾಗ ಭಾರತದ ಸುರಕ್ಷತೆಗೆ ಅಗತ್ಯವಿರುವ ಕಠಿಣ ಕ್ರಮಗಳನ್ನು ಅನುಸರಿಸುವುದು ನಮ್ಮ ಗುರಿಯಾಗಬೇಕಿತ್ತು. ಭವಿಷ್ಯದ ವಿಷಯಕ್ಕೆ ಬಂದಾಗ ತನ್ನ ಸಾಮರ್ಥ್ಯದ ಆಧಾರದಲ್ಲಿ ಜಾಗತಿಕ ರಾಜಕೀಯ ಪರಿಸ್ಥಿಯನ್ನು ನಿಭಾಯಿಸುವುದು ಭಾರತದ ಗುರಿಯಾಗಬೇಕು” ಎಂದು ಹೇಳಿದ್ದಾರೆ.

ಇನ್ನು ಜಾಗತೀಕರಣದ ಕುರಿತಾಗಿ ಪ್ರಶ್ನೆಯೊಂದಕ್ಕೆ “ನಾವು ಇದು ನಮ್ಮದೇ ಜಹಗೀರು ಎಂದು ಸುಮ್ಮನೇ ಕೂರುವ , ಬದಲಾಗಿ ನಮ್ಮ ಅರ್ಹತೆಯ ಆಧಾರದ ಮೇಲೆ ನಮಗೆ ಸರಿಹೊಂದುವ ಜಾಗವನ್ನು ಗಳಿಸಿಕೊಳ್ಳಬೇಕು. ಮುಂದಿನ 25 ವರ್ಷಗಳಲ್ಲಿ ಶಸ್ತ್ರಾಸ್ತ್ರಗಳಿಲ್ಲದ ಸರಿಯಾದ ಜಾಗತೀಕರಣದ ಅಗತ್ಯವಿದೆ” ಎಂದು ಉತ್ತರಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಭಾರತದ ಕೊಡುಗೆಗಳ ಬಗ್ಗೆ ಮಾತನಾಡುತ್ತ ಅವರು “75 ವರ್ಷಗಳ ಹಿಂದೆ ಹೇಗಿತ್ತೋ ಈಗ ಅದಕ್ಕಿಂತ ಹೆಚ್ಚಿನ ಪ್ರಜಾಪ್ರಭುತ್ವವಿದೆ. ಭಾರತವು ಏಷ್ಯಾದಲ್ಲಿ ಪ್ರಜಾಪ್ರಭುತ್ವದ ಪ್ರವರ್ತಕನಿದ್ದಂತೆ. ಮುಂದಿನ ದಿನಗಳಲ್ಲಿ ಭಾರತವು ಈ ಭಾಗಗಳಲ್ಲಿ ಇತರರ ಬೆಳವಣಿಗೆಯ ಭಾಗವಾಗಿ ಹೆಚ್ಚಿನ ಸಮೃದ್ಧಿಯನ್ನು ನೋಡ ಬಯಸುತ್ತದೆ” ಎಂದು ಉತ್ತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!