ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಇಂದು 142.86 ಕೋಟಿ ಜನರೊಂದಿಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ.
ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ.
ವಿಶ್ವಸಂಸ್ಥೆಯ UNFPA ವರದಿಯ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ 25% ಪಾಲು 0-14 ವರ್ಷದವರಾಗಿದ್ದಾರೆ. 10-19 ವರ್ಷ ವಯೋಮಿತಿಯವರು 18% ಮಂದಿ ಇದ್ದಾರೆ. 10ರಿಂದ 24 ವರ್ಷ ವಯೋಮಿತಿಯವರು 26% ಇದ್ದಾರೆ. 15-64 ವರ್ಷ ವಯೋಮಿತಿಯವರು 68% ಇದ್ದಾರೆ. 65 ವರ್ಷಕ್ಕಿಂತ ಮೇಲಿನವರು 7% ಇದ್ದಾರೆ.
ಮುಂಬರುವ ಮೂರು ದಶಕಗಳಲ್ಲಿ ಭಾರತದ ಜನಸಂಖ್ಯೆ 165 ಕೋಟಿಗೆ ಏರಿಕೆಯಾಗಲಿದ್ದು, ಬಳಿಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯಲ್ಲಿ ಅಮೆರಿಕ ಮೂರನೇ ಸ್ಥಾನದಲ್ಲಿದ್ದು, 34 ಕೋಟಿಯಷ್ಟಿದೆ.
ಏಷ್ಯಾದ ಮೂರನೇ ಅತಿ ದೊಡ್ಡ ಎಕಾನಮಿಯಾಗಿರುವ ಭಾರತವು ಜಗತ್ತಿನ ಜನಸಂಖ್ಯೆಯ ಐದನೇ ಒಂದರಷ್ಟು ಪಾಲನ್ನು ಹೊಂದಿದೆ. ಅಗಾಧ ಮಾನವ ಸಂಪನ್ಮೂಲದಿಂದಾಗಿ ಭಾರತ ವಿಶಾಲವಾದ ಮಾರುಕಟ್ಟೆಯನ್ನೂ ಸೃಷ್ಟಿಸಿದೆ. ವಿದೇಶಗಳಲ್ಲೂ ಭಾರತೀಯರು ದುಡಿದು ತವರಿಗೆ ರವಾನಿಸುತ್ತಿದ್ದಾರೆ. ಆದರೆ ಇದೇ ವೇಳೆ ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ಎಲ್ಲರಿಗೂ ಉದ್ಯೋಗಾವಕಾಶಗಳನ್ನು ನೀಡುವುದು ಸವಾಲಾಗಿ ಪರಿಣಮಿಸಿದೆ.