ಹೊಸದಿಗಂತ ವರದಿ,ಮಂಡ್ಯ:
ಜಗತ್ತಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ವಿಫಲವಾದ ಭಾರತ ಇಂದು ವಿಶ್ವಕ್ಕೇ ತಂತ್ರಜ್ಞಾನವನ್ನು ನೀಡುವ ಮಟ್ಟಕ್ಕೆ ಬಂದು ನಿಂತಿದೆ. ಇದಕ್ಕೆ ಇಲ್ಲಿರುವ ಜ್ಞಾನ ಸಂಪತ್ತೇ ಕಾರಣವಾಗಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.
ಕರ್ನಾಟಕ ಸಂಘ, ಬಿ.ಸಿ. ದಾಸೇಗೌಡರ ಕುಟುಂಬ ವರ್ಗದ ವತಿಯಿಂದ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಆಡಳಿತ ತಜ್ಞ ಬಿ.ಜಿ. ದಾಸೇಗೌಡ ಕೃತಿ ಬಿಡುಗಡೆ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವಕ್ಕೇ ಜ್ಞಾನ ನೀಡಿದ್ದ ಭಾರತ 17-18ರ ಶತಮಾನದಲ್ಲಿ ಆದ ಕೈಗಾರಿಕಾ ಕ್ರಾಂತಿ ವೇಳೆ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ವಿಫಲವಾದ ಕಾರಣ ಹಿಂದುಳಿಯಬೇಕಾಯಿತು ಎಂದು ಹೇಳಿದರು.
17ನೇ ಶತಮಾನದಲ್ಲಿ ಭಾರತದ ಜಿಡಿಪಿ ಶೇ. 23.5ರಷ್ಟಿತ್ತು. ಆ ದಿನಗಳಲ್ಲಿ 200ಕ್ಕೂ ಹೆಚ್ಚಿನ ದೇಶಗಳಿಗಿಂತ ಆರ್ಥಿಕ ಶ್ರೇಯಸ್ಸು ಹೆಚ್ಚಿನದ್ದಾಗಿತ್ತು. ಅಲ್ಲಿಯವರೆಗೂ ಜಗತ್ತು ಒಂದೇ ರೀತಿಯಲ್ಲಿ ಸಾಗುತಿತ್ತು. ನಮ್ಮ ದೇಶದಲ್ಲಿ ಜ್ಞಾನ ಹೆಚ್ಚಿತ್ತು. ಜನಗತ್ತಿನಲ್ಲಿಇ ಅಷ್ಟೇನೂ ಏರು ಪೇರು ಇಲ್ಲದ ಕಾರಣ ಸಮಾನವಾಗಿ ಸಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಮೊದಲ ಕೈಗಾರಿಕಾ ಕ್ರಾಂತಿ ಪ್ರಾರಂಭವಾದಾಗ ಅದನ್ನು ಭಾರತ ಸಮರ್ಪಕವಾಗಿ ಬಳಸಿಕೊಂಡು ಹೋಗದೆ ಹಿಂದುಳಿಯಿತು ಎಂದು ವಿವರಿಸಿದರು.