ಜಗತ್ತಿನ 40% ಡಿಜಿಟಲ್‌ ಪೇಮೆಂಟ್‌ ಭಾರತದಲ್ಲಾಗಿದೆ, 15 ಪೈಸೆ ಮಾತ್ರ ಜನರಿಗೆ ತಲುಪುವ ಸ್ಥಿತಿ ಈಗಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆಡಳಿತದಲ್ಲಿ ನೂತನ ತಂತ್ರಜ್ಞಾನಗಳನ್ನು ಸೇರಿಸಿಕೊಂಡು ಉತ್ತಮ ಆಡಳಿತ ನೀಡುವ ಮೂಲಕ ದೇಶದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯಾಗುತ್ತಿದೆ ಎಂದು ಪ್ರಧಾನ ನರೇಂದ್ರ ಮೋದಿ ಹೇಳಿದ್ದಾರೆ.

ಯುರೋಪಿಯನ್‌ ಯೂನಿಯನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸೋಮವಾರ ಬರ್ಲಿನ್‌ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿ “2021ರಲ್ಲಿ ಪ್ರಪಂಚದಾದ್ಯಂತ ನಡೆದ ಒಟ್ಟೂ ಡಿಜಿಟಲ್‌ ಪಾವತಿಗಳಲ್ಲಿ 40% ದಷ್ಟು ಭಾರತದಲ್ಲೇ ಆಗಿದೆ. ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆಯ ಮೂಲಕ ಭ್ರಷ್ಟಾಚಾರವನ್ನು ಪರಿಣಾಮಾತ್ಮಕಾವಾಗಿ ಕಡಿತ ಗೊಳಿಸಲಾಗಿದೆ. ಕಳೆದ 7-8 ವರ್ಷಗಳಲ್ಲಿ ಭಾರತವು ನೇರ ವರ್ಗಾವಣೆ (DBT) ಮೂಲಕ 22 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ ಈ ಮೊತ್ತವು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ತಲುಪಿದೆ” ಎಂದಿದ್ದಾರೆ.

ತಂತ್ರಜ್ಞಾನವನ್ನು ಆಡಳಿತದಲ್ಲಿ ಸಮರ್ಪಕವಾಗಿ ಬಳಸಿಕೊಂಡಿರುವುದು ನವ ಭಾರತದ ಹೊಸ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿರುವ ಅವರು “ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಸುಮಾರು 10,000 ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಸರ್ಕಾರದ ನೆರವು, ವಿದ್ಯಾರ್ಥಿವೇತನ, ರೈತರಿಗೆ ಪಾವತಿಗಳು ಎಲ್ಲವೂ ಕೂಡ ಆನ್‌ ಲೈನ್‌ ನಲ್ಲಿ ನೇರವಾಗಿ ಪಾವತಿಸಲಾಗಿದೆ. ಈಗ ಸರ್ಕಾರದಿಂದ 1 ರೂ ಪಾವತಿಸಿದರೆ 15 ಪೈಸೆ ಮಾತ್ರ ಜನರಿಗೆ ಸೇರುತ್ತದೆ ಎಂದು ಹೇಳುವ ದುಸ್ಥಿತಿಯಿಲ್ಲ”

“2014ರ ನಂತರ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭವಾಗಿದೆ. ದೇಶದಲ್ಲಿ ದಾಖಲೆ ಸಂಖ್ಯೆಯ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಬೃಹತ್‌ ಪ್ರಮಾಣದಲ್ಲಿ ಮೆಟ್ರೊ ನಿರ್ಮಾಣ ಮಾಡಲಾಗುತ್ತಿದೆ. ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನೊಂದಿಗೆ ಹಳ್ಳಿ-ಹಳ್ಳಿಗಳನ್ನೂ ಸಂಪರ್ಕಿಸಲಾಗುತ್ತಿದೆ. ಸರ್ಕಾರಿ ಇಲಾಖೆಗಳು ಮತ್ತು ಎಲ್ಲಾ ಪಾಲುದಾರರ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಎಲ್ಲರನ್ನೂ ಒಂದೇ ವೇದಿಕೆಗೆ ತರಲು ಪಿಎಂ ಗತಿ ಶಕ್ತಿ ಎಂಬ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿದೆ. ಇದರಿಂದ ಹೊಸದಾಗಿ ನಿರ್ಮಾಣ ಮಾಡಿದ ರಸ್ತೆಯನ್ನು ಒಮ್ಮೆ ವಿದ್ಯುತ್‌ ಗೋಸ್ಕರ ಮತ್ತೊಮ್ಮೆ ನೀರಿಗೋಸ್ಕರ ಮತ್ತೆ ಅಗೆಯುವಂತಹ ಪ್ರಸಂಗ ಬರದಂತೆ ತಡೆಯಲಾಗುತ್ತದೆ. ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!