ಹೊಸದಿಗಂತ ಮಂಗಳೂರು:
ಭಾರತ ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರವಾಗುತ್ತಿದೆ. ಕೊರೋನಾ ಕಾಲಘಟ್ಟದ ನಂತರವೂ ಆರ್ಥಿಕತೆಯಲ್ಲಿ ಭಾರತವು ಐದನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸಿಟಿಜನ್ ಕೌನ್ಸಿಲ್ ಮಂಗಳೂರು ಘಟಕದ ವತಿಯಿಂದ ಬುಧವಾರ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಿರ ನೀತಿ- ನಿಲುವುಗಳ ನಾಯಕತ್ವದಿಂದಾಗಿ ದೇಶ ಆರ್ಥಿಕವಾಗಿ ಬಲಿಷ್ಠವಾಗಲು ಸಾಧ್ಯವಾಗಿದೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ಅಲ್ಪಾವಧಿಯ ಹಾಗೂ ದೀರ್ಘ ಕಾಲದ ಗುರಿಗಳನ್ನು ಹಾಕಿಕೊಳ್ಳಲಾಗಿದೆ. ಬಂಡವಾಳ ಹೂಡಿಕೆ, ಮೂಲಸೌಕರ್ಯ, ನಾವೀನ್ಯತೆ, ಒಳಗೊಳ್ಳುವಿಕೆ- ಈ ನಾಲ್ಕು ವಿಚಾರಗಳ ಆಧಾರದಲ್ಲಿ ದೇಶವನ್ನು ಆರ್ಥಿಕತೆ ಅಭಿವೃದ್ಧಿಯನ್ನು ಸಾಧಿಸಲು ಮುಂದಾಗಿದ್ದೇವೆ ಎಂದರು.
ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದೇಶದ ಯಾವುದೇ ರಾಜ್ಯದ ವಿಚಾರದಲ್ಲೂ ಮಲತಾಯಿ ಧೋರಣೆ ತೋರಿಲ್ಲ. ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರವೇ ಎಲ್ಲಾ ರಾಜ್ಯಗಳಿಗೆ ಅನುದಾನ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ಸೇರಿದಂತೆ ಯುಪಿಎ ಅವಧಿಗಿಂತ ಹೆಚ್ಚು ಅನುದಾನ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ವೇಗಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಭಾರತವನ್ನು ಉತ್ಪಾದನಾ ಹಬ್ ಮಾಡುವ ಗುರಿ ಇಟ್ಟುಕೊಂಡು ಕೇಂದ್ರ ಮುನ್ನಡೆಯುತ್ತಿದೆ. ರಕ್ಷಣಾ ಕ್ಷೇತ್ರದ ಸಾಮಗ್ರಿಗಳನ್ನು ತಯಾರಿಸಿ ರಫ್ತು ಮಾಡುವ ದೊಡ್ಡ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.