ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸ್ಮರಣಾರ್ಥವಾಗಿ ಕಾಂಗ್ರೆಸ್ ಪ್ರದರ್ಶಿಸಿದ ಪೋಸ್ಟರ್‌ಗಳಲ್ಲಿ ಭಾರತದ ನಕ್ಷೆಯೇ ತಪ್ಪಾಗಿದ್ದು, ವಿವಾದ ಭುಗಿಲೆದ್ದಿದೆ.
ಆಡಳಿತಾರೂಢ ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಪಟ್ಟಣದಾದ್ಯಂತ ಪೋಸ್ಟರ್‌ಗಳನ್ನು ಹಾಕಿದೆ. ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ಭಾರತದ ನಕ್ಷೆಯು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರದೇಶ ಮತ್ತು ಪ್ರಸ್ತುತ ಚೀನಾದ ಆಡಳಿತದಲ್ಲಿರುವ ಅಕ್ಸಾಯ್ ಚಿನ್ ಪ್ರದೇಶವನ್ನು ಬಿಟ್ಟುಬಿಡಲಾಗಿದೆ. ಅವು ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗವಾಗಿದೆ.
ಇತ್ತ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ರಾಷ್ಟ್ರೀಯ ಪಕ್ಷದಿಂದ ‘ವೋಟ್ ಬ್ಯಾಂಕ್’ ರಾಜಕಾರಣ ಎಂದು ಟೀಕಿಸಿದೆ.
ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ವಿಪಕ್ಷ ನಾಯಕ ರಾಹುಲ್ ಗಾಂಧಿಯ ಮೊಹಬ್ಬತ್ ಕಿ ದುಕಾನ್ ಚೀನಾಕ್ಕೆ ಯಾವಾಗಲೂ ತೆರೆದಿರುತ್ತದೆ. ಕಾಂಗ್ರೆಸ್ಸಿಗರ ಮನಸ್ಥಿತಿ ರಾಷ್ಟ್ರವನ್ನು ಒಡೆಯುವುದೇ ಆಗಿದೆ ಎಂದು ಆರೋಪಿಸಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸಹ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದು ಭಾರತೀಯ ಭೂಪಟವನ್ನು “ತಪ್ಪಾಗಿ ಚಿತ್ರಿಸಿ” ತನ್ನ “ಮತ ಬ್ಯಾಂಕ್” ಅನ್ನು ಸಮಾಧಾನಪಡಿಸುವ ಮಾರ್ಗವೆಂದು ಬಣ್ಣಿಸಿದೆ.
ರಾಜ್ಯ ಬಿಜೆಪಿ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಕಾಂಗ್ರೆಸ್ ಸರ್ಕಾರ ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ ಎಂದು ಹೇಳಿದೆ.
ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ ‘ಸಿದ್ದ’ ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್‌ಗಳೇ ಸಾಕ್ಷಿ. ಸಿಎಂ ಸಿದ್ದರಾಮಯ್ಯ ಅವರೆ, ಕೂಡಲೇ ಈ ವಿವಾದಿತ ಬ್ಯಾನರ್ ಗಳನ್ನು ತೆರವುಗೊಳಿಸಿ, ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.