IND vs SL: ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಸಾಧ್ಯತೆ: ಹೀಗಿರಲಿದೆ ಪ್ಲೇಯಿಂಗ್ XI

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಏಷ್ಯಾಕಪ್ ಸೂಪರ್ 4 ಆರಂಭಿಕ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತಿರುವ ಭಾರತ ಮುಂಬರಲಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ತನ್ನ ಉಳಿದ ಪಂದ್ಯಗಳನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ. ಅದರಲ್ಲಿಯೂ ಇಂದು ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದು. ಈ ಪಂದ್ಯದಲ್ಲಿ ಭಾರತ ತಂಡ ಸೋತರೆ ಬಹುತೇಕ ಏಷ್ಯಾಕಪ್​ನಿಂದ ಹೊರಬೀಳಲಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಭಾರತ ಅಳೆದು ತೂಗಿ ತಂಡವನ್ನು ಆಯ್ಕೆಮಾಡಬೇಕಾದ ಅನಿವಾರ್ಯತೆ ಇದೆ.
ಕಳೆದ ಪಂದ್ಯದಲ್ಲಿ ಅಘಾತಕಾರಿ ಸೋಲು ಎದುರಾಗಿರುವುದರಿಂದ ತಂಡದಲ್ಲಿ ಒಂದೆರಡು ಬದಲಾವಣೆಗಳಾಗಬಹುದು ಎಂದು ಹೇಳಲಾಗುತ್ತಿದೆ. ಪಾಕ್‌ ವಿರುದ್ಧ ಕಳಪೆ ಆಟ ಪ್ರದರ್ಶಿಸಿದ ರಿಷಬ್ ಪಂತ್ ಈ ಪಂದ್ಯದಲ್ಲಿ ಉತ್ತಮ ಲಯದಲ್ಲಿರುವ ಫಿನಿಶರ್ ದಿನೇಶ್ ಕಾರ್ತಿಕ್‌ಗೆ ದಾರಿ ಮಾಡಿಕೊಡಬಹುದು. ಕಳೆದ ಪಂದ್ಯದಲ್ಲಿ ದಿನೇಶ್‌ ಬದಲಾಗಿ ದೀಪಕ್ ಹೂಡಾ ಸ್ಥಾನ ಪಡೆದಿದ್ದರು. ಆದರೆ ಅವರಿಗೆ ಬೌಲಿಂಗ್‌ ನೀಡಿರಲಿಲ್ಲ. ದೀಪಕ್ ಬ್ಯಾಟ್‌ ಮಾತ್ರ ಮಾಡುವುದಾದರೆ ದಿನೇಶ್ ಕಾರ್ತಿಕ್ ರನ್ನು ಹೊರಗಿಟ್ಟಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಭಾರತ ಐದು ಬೌಲರ್‌ಗಳೊಂದಿಗೆ ಹೋಗಲು ನ ನಿರ್ಧರಿಸಿದರೆ ಹೂಡಾ ಸ್ಥಾನದಲ್ಲಿ ಕಾರ್ತಿಕ್ ಒಳಬರಬಹುದು.
‌ಇನ್ನೊಂದು ಬದಲಾವಣೆಯಾಗಿ ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿರುವ ಯುಜ್ವೇಂದ್ರ ಚಹಾಲ್ ರನ್ನು ಡ್ರಾಪ್‌ ಮಾಡಿ ಅಕ್ಷರ್ ಪಟೇಲ್​ಗೆ ಸ್ಥಾನ ನೀಡುವ ಸಾಧ್ಯತೆಯಿದೆ. ಚಹಾಲ್ ಪಾಕ್ ವಿರುದ್ದ 43 ರನ್ ನೀಡಿ ದುಬಾರಿಯಾಗಿದ್ದರು. ಅಕ್ಷರ್ ಪಟೇಲ್​ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಬಲ ತಂಬಬಲ್ಲ ಸಾಮರ್ಥ್ಯ ಹೊಂದಿರುವುದು ಅವರಿಗೆ ಪ್ಲಸ್‌ ಆಗಲಿದೆ.
ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿರುವ ರವಿ ಬಿಷ್ಣೋಯ್ ಪ್ಲೇಯಿಂಗ್ XI ನಲ್ಲಿ ಮುಂದುವರೆಯುವುದು ಬಹುತೇಕ ಖಚಿತ. ಮತ್ತೊಂದು ಬದಲಾವಣೆ ಸಾಧ್ಯತೆ ಎಂದರೆ ಅವೇಶ್ ಖಾನ್‌ ತಂಡಕ್ಕೆ ಮರಳುವುದು. ಆವೇಶ್ ಪ್ರಸ್ತುತ ಫಾರ್ಮ್‌ ಗಮನಿಸಿದರೆ ಆ ಸಾಧ್ಯತೆ ಕಡಿಮೆ.
ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಹೋರಾಟವಾಗಿದ್ದರೆ, ಮತ್ತೊಂದೆಡೆ ಸತತ ಎರಡು ಗೆಲುವುಗಳಿಂದ ಪುಟಿಯುತ್ತಿರುವ ಶ್ರೀಲಂಕಾ ಭಾರತದ ವಿರುದ್ಧವೂ ಗೆದ್ದು ಫೈನಲ್‌ ಗೇರಲು ಎದುರು ನೋಡುತ್ತಿದೆ. ಸೂಪರ್ ಫೋರ್‌ನ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದ ಲಂಕನ್ನರು ಆತ್ಮವಿಶ್ವಾಸದಿಂದ ಭಾರತದ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. ಆದ್ದರಿಂದ ಎರಡೂ ತಂಡಗಳ ನಡುವೆ  ಇಂದು ರೋಚಕ ಕಾದಾಟವನ್ನು ನಿರೀಕ್ಷಿಸಲಾಗಿದೆ.

ಭಾರತದ ಸಂಭಾವ್ಯ XI:
ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ಹಾರ್ದಿಕ್ ಪಾಂಡ್ಯ, ದಿನೇಶ್‌ ಕಾರ್ತಿಕ್ , ಅಕ್ಷರ್‌ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!