ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೇಶದಲ್ಲಿ ಗುರುವಾರ ಕೋವಿಡ್ ಪ್ರಕರಣ 10 ಸಾವಿರ ಗಡಿ ದಾಟಿದ್ದು, ಮತ್ತೆ ಕೋವಿಡ್ ಆತಂಕ ಸೃಷ್ಟಿಸಿದೆ.
ಕಳೆದ 24 ಗಂಟೆಯಲ್ಲಿ 10,158 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ದೈನಂದಿನ ಪಾಸಿಟಿವಿಟಿ ದರ 4.42% ರಷ್ಟಿದೆ. ಇದು ಕಳೆದ 7 ತಿಂಗಳಿನಲ್ಲಿ ಕಂಡು ಬಂದ ಅತ್ಯಧಿಕ ಸೋಂಕುಗಳ ಸಂಖ್ಯೆ ಎನ್ನುವುದು ಅತ್ಯಂತ ಆತಂಕಕಾರಿ ವಿಷಯ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 44,998 ಕ್ಕೆ ಏರಿಕೆಯಾಗಿದೆ. ಬುಧವಾರ 7,830 ಪ್ರಕರಣಗಳು ಪತ್ತೆಯಾಗಿತ್ತು. ಒಟ್ಟು 16 ಮಂದಿ ಮೃತಪಟ್ಟಿದ್ದರು.
ಇಲ್ಲಿಯವರೆಗೆ ಒಟ್ಟು 92.34 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 2,29,958 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಮುಂದಿನ 10-12 ದಿನಗಳವರೆಗೆ ಪ್ರಕರಣಗಳು ಹೆಚ್ಚಾಗುತ್ತವೆ, ನಂತರ ಸೋಂಕುಗಳು ಕಡಿಮೆಯಾಗುತ್ತವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.