ಹಿಜಾಬ್ ವಿವಾದ ಪರಿಹಾರಕ್ಕೆ ನಮ್ಮ ಕಾನೂನಿದೆ, ಆಂತರಿಕ ವ್ಯವಹಾರದಲ್ಲಿ ನಿಮ್ಮ ಹೇಳಿಕೆ ಬೇಕಿಲ್ಲ- ಅಮೆರಿಕ, ಪಾಕಿಸ್ತಾನಗಳಿಗೆ ಭಾರತದ ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನ ಹಾಗೂ ಅಮೆರಿಕಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಖಡಕ್ ಪ್ರತಿಕ್ರಿಯೆ ನೀಡಿದೆ.
“ಭಾರತದ ಆಂತರಿಕ ವಿಷಯಗಳ ಬಗ್ಗೆ ನೀಡುತ್ತಿರುವ ಪ್ರಚೋದನಕಾರಿ ಕಮೆಂಟ್ ಗಳು ಸ್ವಾಗತಾರ್ಹವಲ್ಲ. ಭಾರತದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಹಾಗೂ ಸಮವಸ್ತ್ರದ ಕುರಿತಾದ ವಿಷಯ ಸದ್ಯ ನ್ಯಾಯಾಲಯದಲ್ಲಿದೆ ಹಾಗೂ ಈ ಸಮಸ್ಯೆಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಪರಿಹರಿಸಲಾಗುತ್ತದೆ” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
“ಈಗಾಗಲೇ ಕರ್ನಾಟಕದ ಹಲವು ಶಿಕ್ಷಣ ಸಂಸ್ಥೆಗಳು ತನ್ನ ಸಮವಸ್ತ್ರದ ಕುರಿತಾಗಿ ಕರ್ನಾಟಕ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಯುತ್ತಿದೆ. ಇದನ್ನು ಬಗೆಹರಿಸುವುದಕ್ಕೆ ಸಂವಿಧಾನದ ಚೌಕಟ್ಟು, ಪ್ರಜಾಪ್ರಭುತ್ವದ ಮೌಲ್ಯಗಳು, ಆಡಳಿತ ನೀತಿ ಎಲ್ಲವೂ ನಮ್ಮಲ್ಲಿವೆ. ಭಾರತದ ಬಗ್ಗೆ ತಿಳಿದಿರುವವರು ಈ ವಾಸ್ತವಗಳನ್ನು ಬಲ್ಲರು. ಇದಕ್ಕೆ ಹೊರತಾಗಿ ಬೇರೆ ಉದ್ದೇಶಗಳನ್ನಿಟ್ಟುಕೊಂಡು ಕೊಡುವ ಹೇಳಿಕೆಗಳು ಮತ್ತು ನಮ್ಮ ಆಂತರಿಕ ವಿಚಾರವನ್ನು ಪ್ರಶ್ನಿಸುವುದು ನಮಗೆ ಸಮ್ಮತವಲ್ಲ” ಎಂದಿದೆ ಭಾರತದ ವಿದೇಶ ವ್ಯವಹಾರಗಳ ಕಚೇರಿ.
ಈಗ ಸಂವಿಧಾನದ ವಿಧಾನದಲ್ಲಿಯೇ ಪ್ರಜಾಪ್ರಭುತ್ವದ ನೀತಿ ಹಾಗೂ ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವ ಸಂದರ್ಭ ಎದುರಾಗಿದೆ. ಭಾರತವನ್ನು ತಿಳಿದಿರುವವರು ನಮ್ಮ ಸಾಂವಿಧಾನಿಕ ನಡೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ ಎಂದಿದೆ.
ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ಕಚೇರಿ ಕರ್ನಾಟಕ ಶಾಲೆಗಳು ಹಿಜಾಬ್ ನಿಷೇಧಿಸಬಾರದು, ಇದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಿತ್ತುಕೊಂಡಂತಾಗುತ್ತದೆ ಎಂದು ಹೇಳಿತ್ತು.
ಇನ್ನು, ಪಾಕಿಸ್ತಾನವು ಈ ಸಂಬಂಧ ಭಾರತದ ರಾಯಭಾರಿಯನ್ನು ಕರೆಸಿಕೊಂಡು ಖಂಡನೆ ತಿಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!