ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ಸೃಷ್ಟಿಸಲು ಭಾರತ ಸಜ್ಜು: ಶತಕಕ್ಕೆ ಬೇಕು ಜಸ್ಟ್ 5 ಪದಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯನ್ ಗೇಮ್ಸ್ (Asian Games 2023) ಭಾರತದ ಪದಕದ ಬೇಟೆ ಮುಂದುವರಿದಿದ್ದು,ಶತಕದ ಹೊಸ್ತಿನಲ್ಲಿ ಬಂದು ನಿಂತಿದೆ.

ಭಾರತವು ಈ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಇದುವರೆಗೆ 95 ಪದಕಗಳನ್ನು ಗೆದ್ದಿದ್ದು, ಪದಕಗಳ ಶತಕ ಪೂರೈಸಲು ಇನ್ನು 5 ಪದಕಗಳ ಅವಶ್ಯಕತೆ ಇದೆ. ಈಗಾಗಲೇ ಈ 5 ಪದಕಗಳು ಭಾರತಕ್ಕೆ ಖಾತೆಗೆ ಬೀಳುವುದು ಖಚಿತವಾಗಿದೆ.

ಏಷ್ಯನ್ ಗೇಮ್ಸ್‌ನ 13ನೇ ದಿನದಂದು ಸೋನಮ್ (Sonam Malik) ಹಾಗೂ ಕಿರಣ್ ಬಿಷ್ಣೋಯ್ (Kiran Bishnoi) ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದರೆ, ಭಾರತೀಯ ಪುರುಷರ ತಂಡವು ಬ್ರಿಡ್ಜ್‌ನಲ್ಲಿ ಬೆಳ್ಳಿ ಗೆದ್ದು ದಿನದ ಏಳನೇ ಪದಕವನ್ನು ಗೆದ್ದುಕೊಂಡಿತು.

ಅಥ್ಲೀಟಿಕ್ಸ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತದ 6 ಚಿನ್ನ, 14 ಬೆಳ್ಳಿ ಮತ್ತು ಒಂಬತ್ತು ಕಂಚು ಸೇರಿದಂತೆ 29 ಪದಕಗಳೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದರು. ಇದರಲ್ಲಿ ನೀರಜ್ ಚೋಪ್ರಾ (ಪುರುಷರ ಜಾವೆಲಿನ್), ಅಣ್ಣು ರಾಣಿ (ಮಹಿಳೆಯರ ಜಾವೆಲಿನ್), ತಜಿಂದರ್‌ಪಾಲ್ ಸಿಂಗ್ ತೂರ್ (ಪುರುಷರ ಶಾಟ್‌ಪುಟ್), ಅವಿನಾಶ್ ಸೇಬಲ್ (ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್), ಪಾರುಲ್ ಚೌಧರಿ (ಮಹಿಳೆಯರ 5000 ಮೀ) ಮತ್ತು ಮುಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ (ಪುರುಷರ 4×400 ಮೀ ರಿಲೇ) ಆರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಶೂಟಿಂಗ್​ನಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ ಒಟ್ಟು 22 ಪದಕಗಳೊಂದಿಗೆ ಭಾರತೀಯ ಶೂಟರ್‌ಗಳು ಮನೆಗೆ ಮರಳಿದ್ದರು.

ಇದೀಗ ಪುರುಷರ ಕ್ರಿಕೆಟ್ ತಂಡ ಫೈನಲ್ ತಲುಪಿದ್ದು ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಸೆಮಿಫೈನಲ್‌ ಪ್ರವೇಶಿಸಿರುವುದರಿಂದ ಕನಿಷ್ಠ ಕಂಚಿನ ಪದಕ ಗೆಲ್ಲುವುದು ಖಚಿತವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!