ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಕ್ವಾಡ್ ಪಡೆಯ ದೇಶಗಳು ಉಕ್ರೇನ್ ವಿರುದ್ಧ ರಷ್ಯ ಆಕ್ರಮಣಕ್ಕೆ ತೀವ್ರ ಪ್ರತಿಕ್ರಿಯೆಯನ್ನೇ ನೀಡಿವೆ. ಆಸ್ಟ್ರೇಲಿಯ ಮತ್ತು ಜಪಾನ್ ರಷ್ಯ ವಿರುದ್ಧ ಪ್ರತಿಕ್ರಿಯಾತ್ಮಕ ಕ್ರಮ ಕೈಗೊಳ್ಳುವುದರಲ್ಲಿ ದೃಢತೆ ತೋರಿವೆ. ಈ ವಿಷಯದಲ್ಲಿ ಕ್ವಾಡ್ ಸದಸ್ಯ ರಾಷ್ಟ್ರವಾದ ಭಾರತದ್ದೇ ಅಷ್ಟೊಂದು ದೃಢವಲ್ಲದ ನಿಲುವು.” ಹೀಗಂತ ಅಮೆರಿಕ ಅಧ್ಯಕ್ಷ ಜೊ ಬಿಡೆನ್ ಹೇಳಿದ್ದಾರೆ.
ರಷ್ಯ ಕುರಿತು ನಿರ್ಬಂಧಗಳ ನಿಯಮಗಳನ್ನು ಅನುಸರಿಸುವಂತೆ ಭಾರತದ ಮೇಲೆ ಪಾಶ್ಚಾತ್ಯರ ಒತ್ತಡ ಮೊದಲಿನಿಂದಲೂ ಇತ್ತು. ಆದರೆ ಈ ವಿಚಾರದಲ್ಲಿ ದೇಶದ ಹಿತಾಸಕ್ತಿ ಗಮನಿಸಿರುವ ಭಾರತ ತಟಸ್ಥವಾಗಿ ಉಳಿದಿದೆ.
ಬಿಡೆನ್ ಹೇಳಿದ ಧಾಟಿಯ ಅಸಮಾಧಾನಗಳು ಭಾರತದ ಮೇಲೆ ಆಗೀಗ ವ್ಯಕ್ತವಾಗಿವೆಯಾದರೂ ಯಾರೂ ಈ ವಿಚಾರವಾಗಿ ಭಾರತದ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಂತದಲ್ಲಿಲ್ಲ. ಏಕೆಂದರೆ ಇಂಡೊ-ಫೆಸಿಫಿಕ್ ನಿಭಾಯಿಸುವುದಕ್ಕೆ ಹಾಗೂ ಚೀನಾಕ್ಕೆ ಪರ್ಯಾಯವಾದ ಕಾರ್ಯತಂತ್ರ ನಿರೂಪಣೆಗೆ ಭಾರತ ಅತ್ಯಗತ್ಯ ಎಂಬುದು ಎಲ್ಲರಿಗೂ ಮನವರಿಕೆಯಾದಂತಿದೆ.