ಪಿಎಲ್‌ಐ ಯೋಜನೆಯ ಯಶಸ್ಸಿನ ಸೂಚನೆ- ₹ 10000 ಕೋಟಿಗಳ ಉತ್ಪನ್ನ ರಫ್ತು ಮಾಡಲಿರುವ ಆ್ಯಪಲ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿಯಲ್ಲಿ ದೇಶದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ ಮೊದಲ ವರ್ಷದಲ್ಲಿ ಆ್ಯಪಲ್ ಕಂಪನಿ ಉತ್ತಮ ಸಾಧನೆ ತೋರಿದೆ. 2022ರ ಆರ್ಥಿಕ ವರ್ಷದಲ್ಲಿ ₹ 10,000 ಕೋಟಿ ಮೌಲ್ಯದ ಉತ್ಪನ್ನಗಳ ರಫ್ತು ಮಾಡಲಿದೆ. ಇದು ಕಂಪನಿ ಭಾರತದಲ್ಲಿ ಬಲವಾದ ನೆಲೆ ಸ್ಥಾಪಿಸುವುದಕ್ಕೆ ಸಾಕ್ಷಿಯಾಗಿದೆ.

ಇದಲ್ಲದೆ, ಈ ಹಣಕಾಸಿನ ಅವಧಿಯಲ್ಲಿ ಆ್ಯಪಲ್ ದೇಶೀಯ ಉತ್ಪಾದನೆಯ ಮೂಲಕ ಭಾರತದಲ್ಲಿ ತನ್ನ ಒಟ್ಟು ಬೇಡಿಕೆಯ ಶೇ. 75-80 ರಷ್ಟು ಪೂರೈಸಲು ಸಾಧ್ಯವಾಗಿದೆ. ಒಂದು ವರ್ಷದ ಹಿಂದೆ ದೇಶೀಯ ಉತ್ಪಾದನೆಯ ಮೂಲಕ ಕೇವಲ ಶೇ. 10-15 ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಿತ್ತು. ಮುಂದಿನ ಹಣಕಾಸು ವರ್ಷದಲ್ಲಿ ಕಂಪನಿಯು ತನ್ನ ದೇಶೀಯ ಉತ್ಪಾದನೆಯ ಮೂಲಕ ದೇಶೀಯ ಬೇಡಿಕೆಯ ಇನ್ನೂ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಪೂರೈಸಲು ಸಾಧ್ಯವಾಗಲಿದೆ.

ಭಾರತದಲ್ಲಿ ಆ್ಯಪಲ್ ಫೋನ್‌ಗಳನ್ನು ಅದರ ಗುತ್ತಿಗೆ ತಯಾರಕರು ಉತ್ಪಾದಿಸುತ್ತಾರೆ. ಪಿಎಲ್‌ಐ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ವಿಸ್ಟ್ರಾನ್ ಮತ್ತು ಫಾಕ್ಸ್ ಕಾನ್ ಹಾನ್ ಹೈ ಸಂಸ್ಥೆಗಳು ಈ ರಫ್ತು ಗುರಿಯನ್ನು ಸಾಧಿಸಿವೆ. ಆಪಲ್‌ನ ಮೂರನೇ ಗುತ್ತಿಗೆ ತಯಾರಕ ಸಂಸ್ಥೆ ಪೆಗಾಟ್ರಾನ್ ಕೂಡ ಪಿಎಲ್‌ಐ ಅಡಿಯಲ್ಲಿ ಆಯ್ಕೆಯಾಗಿದೆ. ಆದರೆ ಈ ಕಂಪನಿ ಏಪ್ರಿಲ್ 1ರಿಂದ ಉತ್ಪಾದನೆ ಪ್ರಾರಂಭಿಸುತ್ತದೆ, ಆದ್ದರಿಂದ ಅದರ ಎರಡನೇ ವರ್ಷದ ಕಾರ್ಯಾಚರಣೆಯಲ್ಲಿ ದೇಶದಿಂದ ಆ್ಯಪಲ್ ರಫ್ತು ಮತ್ತಷ್ಟು ಹೆಚ್ಚಾಗುತ್ತದೆ.

ರಫ್ತಿನಲ್ಲಿ ಕರ್ನಾಟಕದ ಪಾಲು ಅತಿಹೆಚ್ಚು
ವಿಸ್ಟ್ರಾನ್ ಕರ್ನಾಟಕದಲ್ಲಿದ್ದರೆ, ಫಾಕ್ಸ್ ಕಾನ್ ತಮಿಳುನಾಡಿನಲ್ಲಿದೆ. ಹೆಚ್ಚು ರಫ್ತು ಮಾಡಲಾದ ಐಫೋನ್ ಮಾದರಿಗಳೆಂದರೆ ಎಸ್‌ಇ2020, ಇದನ್ನು ವಿಸ್ಟ್ರಾನ್ ತಯಾರಿಸಿದೆ. ನಂತರ ಐಫೋನ್ 11 ಮತ್ತು 12 ಅನ್ನು ಫಾಕ್ಸ್ ಕಾನ್ ತಯಾರಿಸುತ್ತಿದೆ. ಫಾಕ್ಸ್ ಕಾನ್ ಶೀಘ್ರದಲ್ಲೇ ಭಾರತದಲ್ಲಿ ಐಫೋನ್ 13 ಉತ್ಪಾದನೆ ಪ್ರಾರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

2021 ಆಗಸ್ಟ್‌ನಿಂದ ಭಾರತದಲ್ಲಿ ಆ್ಯಪಲ್ ಉತ್ಪಾದನೆ
ಆ್ಯಪಲ್ ನ ದೇಶೀಯ ಉತ್ಪಾದನೆ ಕೇವಲ ಎರಡು ವರ್ಷಗಳ ಹಳೆಯ ವಿದ್ಯಮಾನ. ಕೇಂದ್ರ ಸರಕಾರವು ಏಪ್ರಿಲ್ 2020ರಲ್ಲಿ ಸ್ಮಾರ್ಟ್ ಫೋನ್‌ಗಳಿಗಾಗಿ ತನ್ನ ಪಿಎಲ್‌ಐ ಯೋಜನೆಯನ್ನು ಅನಾವರಣಗೊಳಿಸಿತು ಮತ್ತು ಆಯ್ದ ಕಂಪನಿಗಳು ಅದೇ ವರ್ಷ ಆಗಸ್ಟ್‌ನಿಂದ ಕಾರ್ಯಾಚರಣೆ ಪ್ರಾರಂಭಿಸಿದವು. ಆದಾಗ್ಯೂ, ಕೋವಿಡ್ ಮೊದಲ ವರ್ಷ ಸಂಪೂರ್ಣ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿತು. ನಂತರ ಸರಕಾರವು ಯೋಜನೆಯ ಅವಧಿಯನ್ನು ಐದು ವರ್ಷಗಳಿಂದ ಆರಕ್ಕೆ ವಿಸ್ತರಿಸಿತು. ಈ ರೀತಿ ಪಿಎಲ್‌ಐ ಅಡಿಯಲ್ಲಿ ಆ್ಯಪಲ್‌ನ ಉತ್ಪಾದನೆ ಆಗಸ್ಟ್ 2021ರಿಂದ ಪ್ರಾರಂಭವಾಯಿತು.

ಜಾಗತಿಕ ಉತ್ಪಾದನಾ ನೆಲೆಯನ್ನು ಭಾರತಕ್ಕೆ ವರ್ಗಾಯಿಸುವುದು, ಭಾರತವನ್ನು ಫೋನ್‌ಗಳ ರಫ್ತು ಕೇಂದ್ರವನ್ನಾಗಿ ಮಾಡುವುದು ಮತ್ತು ದೇಶೀಯ ಬೇಡಿಕೆಯನ್ನು ಪೂರೈಸುವಂತಹ ಪಿಎಲ್‌ಐ ಯೋಜನೆಯಡಿಯಲ್ಲಿ ಸರಕಾರವು ನಿಗದಿಪಡಿಸಿದ ಉದ್ದೇಶವನ್ನು ಆಪಲ್ ತನ್ನ ಮೊದಲ ವರ್ಷದ ಕಾರ್ಯಕ್ಷಮತೆಯಿಂದ ಸಾಧಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಸ್ಮಾರ್ಟ್ ಫೋನ್ ಪಿಎಲ್‌ಐ ಅಂತಹ ಮೊದಲ ಯೋಜನೆಯಾಗಿದ್ದು, ಅದರ ಆಧಾರದ ಮೇಲೆ ಸರಕಾರವು ಹಲವಾರು ಇತರ ಕ್ಷೇತ್ರಗಳಿಗೆ ವಿಸ್ತರಿಸಿದೆ.

ಐದು ವರ್ಷಗಳಲ್ಲಿ ಸ್ಮಾರ್ಟ್ ಫೋನ್ ಪಿಎಲ್‌ಐಗಾಗಿ ಒಟ್ಟು ವೆಚ್ಚವು ₹ 40,951 ಕೋಟಿಗಳಾಗಿದ್ದು, ವಾರ್ಷಿಕವಾಗಿ ಶೇ. 4-6ರಷ್ಟು ಪ್ರೋತ್ಸಾಹಕ ಶ್ರೇಣಿಯಾಗಿರುತ್ತದೆ. ಪ್ರೋತ್ಸಾಹಕ್ಕೆ ಅರ್ಹತೆ ಪಡೆಯಲು ಕಂಪನಿಗಳು ಹೆಚ್ಚು ಮಾರಾಟ ಮತ್ತು ಉತ್ಪಾದನಾ ಗುರಿಗಳನ್ನು ಪೂರೈಸಬೇಕು.
ಯೋಜನೆಯಡಿ ಐದು ಜಾಗತಿಕ ಮತ್ತು ಸ್ಥಳೀಯ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಜಾಗತಿಕವಾಗಿ ಸ್ಯಾಮ್ ಸಂಗ್ ಹೊರತುಪಡಿಸಿ, ಇತರ ನಾಲ್ಕು – ಫಾಕ್ಸ್ ಕಾನ್ ಹಾನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಆಪಲ್‌ನ ಗುತ್ತಿಗೆ ತಯಾರಕರು. ಈ ಸಂಸ್ಥೆಗಳು 15,000 ರೂ.ಗಿಂತ ಹೆಚ್ಚಿನ ಸರಕುಪಟ್ಟಿ ಮೌಲ್ಯದ ಫೋನ್‌ಗಳನ್ನು ತಯಾರಿಸಬೇಕು.

ಈ ಯೋಜನೆಯಡಿ ಆಯ್ಕೆಯಾದ ಭಾರತೀಯ ಕಂಪನಿಗಳೆಂದರೆ ಲಾವಾ, ಭಗವತಿ (ಮೈಕ್ರೊಮ್ಯಾಕ್ಸ್), ಪ್ಯಾಜೆಟ್ ಎಲೆಕ್ಟ್ರಾನಿಕ್ಸ್, ಯುಟಿಎಲ್ ನಿಯೋಲಿಂಕ್ಸ್ ಮತ್ತು ಆಪ್ಟಿಮಸ್ ಎಲೆಕ್ಟ್ರಾನಿಕ್ಸ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!