ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಹಮತ ಮೂಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬಳಿಕ ದೇಶದ ರಾಜಕೀಯ ವಲಯದಲ್ಲಿ ಚರ್ಚೆ ತೀವ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ವಿಚಾರದಲ್ಲಿ ಒತ್ತಡಕ್ಕೆ ಒಳಗಾಗಿ ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ದೂರವಾಣಿ ಸಂಭಾಷಣೆ ನಡೆದ ಬಳಿಕ, ಭಾರತದಿಂದ ಅಮೆರಿಕಕ್ಕೆ ರಫ್ತು ಆಗುವ ಕೆಲವು ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸುವ ನಿರ್ಧಾರ ಪ್ರಕಟಿಸಲಾಗಿದೆ. ಯುರೋಪಿಯನ್ ಒಕ್ಕೂಟದೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ:
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ವಾಷಿಂಗ್ಟನ್‌ನಲ್ಲಿ ‘ಮೊಗಾಂಬೋ ಖುಷ್ ಹೈ’ ಎನ್ನುವಂತಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ. ವಿದೇಶಾಂಗ ಮತ್ತು ವ್ಯಾಪಾರ ಸಂಬಂಧಿತ ಪ್ರಮುಖ ಘೋಷಣೆಗಳು ಭಾರತದಲ್ಲಿ ಅಲ್ಲ, ಅಮೆರಿಕದ ರಾಜಧಾನಿಯಿಂದಲೇ ಹೊರಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ಇದೇ ವೇಳೆ, ರಷ್ಯಾ ಹಾಗೂ ವೆನೆಜುವೆಲಾದಿಂದ ತೈಲ ಖರೀದಿ, ‘ಆಪರೇಷನ್ ಸಿಂಧೂರ’ ಸ್ಥಗಿತ ಸೇರಿದಂತೆ ಹಲವು ವಿಷಯಗಳನ್ನು ಟ್ರಂಪ್ ವಾಷಿಂಗ್ಟನ್‌ನಿಂದಲೇ ಘೋಷಿಸಿದ್ದನ್ನು ರಮೇಶ್ ನೆನಪಿಸಿದರು. ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.



