ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಪಂದ್ಯಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಟ್ವಿಟ್ಟರ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ. ಇಂದಿನ ಪಂದ್ಯದಲ್ಲಿ ಹಿಂಸಾತ್ಮಕ ಕೃತ್ಯ ನಡೆಸಲು ಸಿದ್ಧತೆ ನಡೆದಿದೆ ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಟ್ವೀಟ್ ಅನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಎಲ್ಲೆಡೆ ತಪಾಸಣೆ ಚುರುಕುಗೊಂಡಿದೆ.
ಟ್ವಿಟರ್‌ನಲ್ಲಿ ವಾಂಖೆಡೆ ಸ್ಟೇಡಿಯಂಗೆ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ತೀವ್ರ ತಪಾಸಣೆ ನಡೆಯುತ್ತಿದ್ದು, ಟ್ವಿಟರ್‌ನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ ಅನಾಮಧೇಯ ವ್ಯಕ್ತಿಗೆ ಹುಡುಕಾಟ ಶುರುವಾಗಿದೆ. ಮುಂಬೈ ಪೊಲೀಸರನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ ವ್ಯಕ್ತಿ ಗನ್, ಹ್ಯಾಂಡ್ ಗ್ರೆನೇಡ್ ಮತ್ತು ಬುಲೆಟ್‌ಗಳ ಚಿತ್ರಗಳನ್ನು ತೋರಿಸಿದ್ದಾನೆ. ಅನಾಮಧೇಯ ಖಾತೆಯಿಂದ ಬಂದ ಟ್ವೀಟ್ ಕುರಿತು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ವಾಂಖೆಡೆ ಸ್ಟೇಡಿಯಂ ಪ್ರವೇಶಿಸುವ ಪ್ರತಿಯೊಬ್ಬರನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಸಾಧ್ಯತೆ ಇದೆ. ಭದ್ರತೆ, ಪ್ರೋಟೋಕಾಲ್ ಮತ್ತು ಇತರ ಅಂಶಗಳನ್ನು ಬಿಗಿಗೊಳಿಸಲು ಮುಂಬೈ ಪೊಲೀಸರು ಸಿದ್ಧರಾಗಿದ್ದಾರೆ. ಕ್ರೀಡಾಂಗಣದ ಸುತ್ತಮುತ್ತ ಭದ್ರತೆ ಹೆಚ್ಚಿಸಿದ್ದು, ಪೊಲೀಸ್ ಹದ್ದಿನ ಕಣ್ಣಿಟ್ಟಿದೆ.