ಭಾರತದ ಗೋದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ, ರಷ್ಯ-ಉಕ್ರೇನ್ ಸಂಘರ್ಷದ ಪರಿಣಾಮವಿದು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿಬಿಡುವ ಯುದ್ಧ, ಕೆಲವೊಂದು ಅನಿರೀಕ್ಷಿತ ಲಾಭಗಳನ್ನೂ ತಂದುಬಿಡುತ್ತದೆ.

ರಷ್ಯ-ಉಕ್ರೇನ್ ಸಂಘರ್ಷದ ಕಾರಣದಿಂದ ತೈಲ ಬೆಲೆ ಏರಿಕೆ ಬಿಸಿಗೆ ಆತಂಕಿತವಾಗಿರುವ ಭಾರತವು ಒಂದು ವಿಷಯದಲ್ಲಿ ಮಾತ್ರ ತುಸು ಲಾಭ ಪಡೆಯುವತ್ತ ಮುಖ ಮಾಡಿದೆ. ಅದೆಂದರೆ, ಗೋದಿಯ ರಫ್ತು!

ರಷ್ಯ ಮತ್ತು ಉಕ್ರೇನ್ ಗಳು ಒಟ್ಟಾಗಿ ಜಗತ್ತಿನ ಬೇಡಿಕೆಯ ಶೇಕಡ 25ರಷ್ಟು ಗೋದಿಯನ್ನು ಮಾರುಕಟ್ಟೆಗೆ ಒದಗಿಸುತ್ತಿವೆ. ಇದೀಗ ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳ ಕಾರಣದಿಂದ ಆ ಪೂರೈಕೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.

ಇತ್ತ, ಕೆಲವು ವರ್ಷಗಳಿಂದ ಗೋದಾಮುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಗೋದಿ ತುಂಬಿಸಿಟ್ಟುಕೊಂಡಿದ್ದ ಭಾರತಕ್ಕೆ ಈಗ ತುಸು ಪರಿಸ್ಥಿತಿಯ ಪ್ರಯೋಜನವಾಗುತ್ತಿದೆ. ಹಾಗಿದ್ದೂ, ಜಗತ್ತಿನ ಬೇಡಿಕೆಯ ಶೇ.1ರ ರಫ್ತೂ ಭಾರತದಿಂದ ಆಗುತ್ತಿಲ್ಲ ಎಂಬುದು ಗಮನಾರ್ಹ.

ಅದೇನೇ ಇದ್ದರೂ, ಸದ್ಯಕ್ಕೆ ಭಾರತದ ಗೋದಿಗೆ ಭಾರಿ ಬೇಡಿಕೆ ಬಂದಿದ್ದು, ಹಲವು ರಫ್ತು ಗುತ್ತಿಗೆಗಳು ಸಿಕ್ಕಿವೆ.

ಎರಡು ಕಾರಣಗಳಿಂದ ಭಾರತದ ಗೋದಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿರಲಿಲ್ಲ. ಒಂದು, ತನ್ನ ಪಡಿತರ ವ್ಯವಸ್ಥೆಗೆ ಭಂಗ ಬರದಿರಲಿ ಎಂದು ಭಾರತ ಹೆಚ್ಚುವರಿ ಗೋದಿಯನ್ನು ಸಹ ತನ್ನಲ್ಲೇ ಇಟ್ಟುಕೊಳ್ಳುತ್ತಿತ್ತು. ಎರಡನೆಯದಾಗಿ, ಬೆಂಬಲ ಬೆಲೆ ನೀಡುವುದಕ್ಕೆ ಗೋದಿಗೆ ಸರ್ಕಾರವೇ ಹಣ ವ್ಯಯಿಸುತ್ತದೆಯಾದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಟ್ಟು ಅದಕ್ಕೆ ಸ್ಪರ್ಧಾತ್ಮಕ ಬೆಲೆ ಪಡೆಯುವುದು ಈವರೆಗೆ ಸಾಧ್ಯವಿರಲಿಲ್ಲ. ಆದರೆ ರಷ್ಯ-ಉಕ್ರೇನ್ ಸಂಘರ್ಷವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋದಿ ಬೆಲೆಯನ್ನು ಕಳೆದ 14 ವರ್ಷಗಳಲ್ಲೇ ಅತಿ ಹೆಚ್ಚಿನದಾಗಿಸಿರುವುದರಿಂದ ಈ ಹಂತದಲ್ಲಿ ಗೋದಿಯನ್ನು ಮಾರುವುದರಲ್ಲಿ ಭಾರತಕ್ಕೆ ಲಾಭವಿದೆ.

ಅಲ್ಲದೇ, ರಷ್ಯ ಮತ್ತು ಉಕ್ರೇನ್ ಮೂಲದ ಗೋದಿಯನ್ನು ಅವಲಂಬಿಸಿದ್ದ ದೇಶಗಳಲ್ಲಿ ಪಕ್ಕದ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಇಂಡೊನೇಷ್ಯ, ಪಿಲಿಪ್ಪೀನ್ಸ್ ಇರುವುದರಿಂದ ಇವರಿಗೆಲ್ಲ ಗೋದಿ ಕಳುಹಿಸುವ ಸಾಗಣೆ ವೆಚ್ಚವೂ ಕಡಿಮೆ ಇರಲಿದೆ.

ಉದ್ದೇಶಿತ 13.8 ಮಿಲಿಯನ್ ಟನ್ನಿಗೆ ಮೀರಿ 28.27 ಮಿಲಿಯನ್ ಟನ್ ಗೋದಿಯನ್ನು ಭಾರತ ತನ್ನ ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹಿಸಿದೆ. ಅಲ್ಲದೇ, 2022ರಲ್ಲಿ ರೈತರು ಮತ್ತೆ ಬಂಪರ್ ಬೆಳೆ ಎದುರು ನೋಡುತ್ತಿದ್ದು, ಇನ್ನೊಂದು ತಿಂಗಳಲ್ಲೇ ಮತ್ತೆ ಅಂದಾಜು 111 ಮಿಲಿಯನ್ ಟನ್ ಗೋದಿ ಜಮೆಯಾಗಲಿದೆ.

ಇವೆಲ್ಲವೂ ಅಂತಾರಾಷ್ಟ್ರೀಯ ಗೋದಿ ಮಾರುಕಟ್ಟೆಯ ಲಾಭ ಪಡೆಯುವುದಕ್ಕೆ ಭಾರತಕ್ಕೆ ಅನುಕೂಲಕರ ಸ್ಥಿತಿ ನಿರ್ಮಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!