ಡ್ರೋನ್ ತಂತ್ರಜ್ಞಾನದ ಹಬ್ ಆಗಲಿದೆ ಭಾರತ: ಕೇಂದ್ರಸಚಿವ ಅನುರಾಗ್‌ ಠಾಕೂರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ಡ್ರೋನ್ ತಂತ್ರಜ್ಞಾನದ ಕೇಂದ್ರವಾಗಲಿದೆ ಮತ್ತು ಮುಂದಿನ ವರ್ಷದ ವೇಳೆಗೆ ಕನಿಷ್ಠ 100,000 ಡ್ರೋನ್ ಪೈಲಟ್‌ಗಳ ಅಗತ್ಯವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಮಂಗಳವಾರ ಚೆನ್ನೈನಲ್ಲಿ ಡ್ರೋನ್ ಯಾತ್ರಾ 2.0 ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ರಕ್ಷಣೆಯಿಂದ ಕೃಷಿ ಮತ್ತು ಆರೋಗ್ಯದವರೆಗೆ ಮನರಂಜನೆಯ ವಿವಿಧ ಕ್ಷೇತ್ರಗಳಿಗೆ ಡ್ರೋನ್ ತಂತ್ರಜ್ಞಾನವು ಅವಶ್ಯಕವಾಗಿದೆ. ಉತ್ಪಾದನೆ ಆಧರಿತ ಉತ್ತೇಜನ(ಪಿಎಲ್‌ಐ) ನಂತಹ ಯೋಜನೆಗಳ ಮೂಲಕ ದೇಶದಲ್ಲಿ ಬಲವಾದ ಡ್ರೋನ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಭಾರತ ಸಾಗುತ್ತಿದೆ ಎಂದು ಹೇಳಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಮತ್ತು ಮನೆಗಳ ಸಮೀಕ್ಷೆ, ಹೊಲಗಳಲ್ಲಿ ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಸಿಂಪಡಿಸುವುದು ಮತ್ತು 2021 ರಲ್ಲಿ ಭಾರತೀಯ ಕ್ರಿಕೆಟ್ ವೈಮಾನಿಕ ಸಿನಿಮಾಟೋಗ್ರಫಿ ಸೇರಿದಂತೆ ಭಾರತದಲ್ಲಿ ಡ್ರೋನ್ ತಂತ್ರಜ್ಞಾನದ ವಿವಿಧ ಬಳಕೆಗಳ ಕುರಿತು ಉಲ್ಲೇಖಿಸಿದ್ದಾರೆ.

ಭಾರತದ ಅತಿದೊಡ್ಡ ಡ್ರೋನ್ ಉತ್ಪಾದನಾ ಸೌಲಭ್ಯವನ್ನು ರಚಿಸಲು ಗರುಡಾ ಏರೋಸ್ಪೇಸ್ ಪ್ರಯತ್ನಗಳನ್ನು ಶ್ಲಾಘಿಸಿದ ಅವರು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಬದ್ಧತೆಯನ್ನು ವಿವಿರಿಸಿದ್ದಾರೆ. 2023 ರಲ್ಲಿ ಭಾರತಕ್ಕೆ ಕನಿಷ್ಠ 1 ಲಕ್ಷ ಡ್ರೋನ್‌ ಪೈಲಟ್‌ಗಳು ಬೇಕಾಗುತ್ತಾರೆ ಎಂದು ಹೇಳಿದ ಅವರು, ಪ್ರತಿ ಪೈಲಟ್ ತಿಂಗಳಿಗೆ ಕನಿಷ್ಠ 50-80 ಸಾವಿರ ಗಳಿಸಲಿದ್ದಾರೆ. ಡ್ರೋನ್‌ ಉದ್ಯಮವು ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದ್ದು ವಿಫುಲ ಅವಕಾಶಗಳನ್ನು ಡ್ರೋನ್‌ ಉದ್ಯಮ ತೆರೆದಿಡಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!