ಹೊಸ ದಿಗಂತ ಡಿಜಿಟಲ್ ಡೆಸ್ಕ್:
2050 ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎಂದು ವರದಿಯೊಂದು ಹೇಳಿದೆ.
ಪ್ಯೂ ರಿಸರ್ಚ್ ಸೆಂಟರ್ (Pew Research Center, India) ಪ್ರಕಟಿಸಿದ ವರದಿಯಲ್ಲಿ 2050ರ ವೇಳೆಗೆ ಭಾರತವು ಇಂಡೋನೇಷ್ಯಾವನ್ನು ಹಿಂದಿಕ್ಕಿ ಅತೀ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾಗಲಿದೆ ಎಂದು ತಿಳಿಸಿದೆ.
ಆ ವೇಳೆ ಇಲ್ಲಿ ಸುಮಾರು 311 ಮಿಲಿಯನ್ (31.1 ಕೋಟಿ) ಮುಸ್ಲಿಮರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು ಪಾಕಿಸ್ತಾನ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಲಿದ್ದು, ಅಲ್ಲಿ ಮುಸ್ಲಿಮರ ಜನಸಂಖ್ಯೆ 273 ಮಿಲಿಯನ್ (27.3 ಕೋಟಿ)ಗೆ ತಲುಪಲಿದೆ. ಈಗ ಅತೀ ಹೆಚ್ಚು ಮುಸ್ಮಿಮರನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ 2050ರ ವೇಳೆಗೆ ಜನಸಂಖ್ಯೆ 257 ಮಿಲಿಯನ್ (25.7 ಕೋಟಿ)ಗೆ ತಲುಪಿ 3ನೇ ಸ್ಥಾನಕ್ಕೆ ಕುಸಿಯಲಿದೆ.
ಇದೇ ವೇಳೆಗೆ ಹಿಂದು ವಿಶ್ವದ 3ನೇ ಅತೀ ದೊಡ್ಡ ಧರ್ಮವಾಗಿ ಹೊರ ಹೊಮ್ಮಲಿದೆ. ಇನ್ನು 2050ರ ವೇಳೆಗೆ ಜಾಗತಿಕವಾಗಿ ಮುಸ್ಲಿಮರ ಜನಸಂಖ್ಯೆ ಶೇ. 11ರಷ್ಟು ಹೆಚ್ಚಾಗಲಿದೆ. ಭಾರತದಲ್ಲಿ 103 ಕೋಟಿ ಹಿಂದುಗಳು ಇರಲಿದ್ದಾರೆ. ಆ ಮೂಲಕ ದೇಶದಲ್ಲಿ ಹಿಂದುಗಳು ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಭಾರತದಲ್ಲಿ 4 ಮಂದಿಯ ಪೈಕಿ ಮೂವರು ಹಿಂದುಗಳೇ ಆಗಿರಲಿದ್ದಾರೆ.
ಹೆಚ್ಚಿನ ಫಲವತ್ತತೆಯ ಪ್ರಮಾಣದಿಂದಾಗಿ ಭಾರತದಲ್ಲಿ ಮತ್ತು ಜಾಗತಿಕವಾಗಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯಲಿದೆ. 2010ರಲ್ಲಿ ಮುಸ್ಲಿಮರ ಒಟ್ಟು ಜನಸಂಖ್ಯೆಯ ಶೇ. 14.4ರಷ್ಟಿದ್ದರೆ 2050ರ ವೇಳೆಗೆ ಇದು ಶೇ. 18.4ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಪ್ರತಿ ಮುಸ್ಲಿಂ ಮಹಿಳೆಯರು ಸರಾಸರಿ 3.2 ಮಕ್ಕಳನ್ನು ಹೊಂದಿದ್ದರೆ, ಹಿಂದು ಮಹಿಳೆಯರು ಸರಾಸರಿ 2.5 ಮಕ್ಕಳನ್ನು ಮತ್ತು ಕ್ರಿಶ್ಚಿಯನ್ ಮಹಿಳೆಯರು ಸರಾಸರಿ 2.3 ಮಕ್ಕಳನ್ನು ಹೊಂದಿದ್ದಾರೆ.
ಭಾರತದಲ್ಲಿನ ಹಿಂದು ಜನಸಂಖ್ಯೆಯು ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ನೈಜೀರಿಯಾ ಮತ್ತು ಬಾಂಗ್ಲಾದೇಶ ಸೇರಿದಂತೆ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ದೇಶಗಳ ಮುಸ್ಲಿಂ ಜನಸಂಖ್ಯೆಯನ್ನು ಮೀರಿಸಲಿದೆ. ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯ ಶೇ. 2.5ರಷ್ಟಿರುವ ಕ್ರಿಶ್ಚಿಯನ್ ಜನಸಂಖ್ಯೆಯು 2050ರ ವೇಳೆಗೆ ಶೇ. 2.3ಕ್ಕೆ ಇಳಿಯುತ್ತದೆ ಎಂದು ವರದಿ ತಿಳಿಸಿದೆ.
ವಿಶ್ವಾದ್ಯಂತ ಹಿಂದು ಜನಸಂಖ್ಯೆಯು 2050ರ ವೇಳೆಗೆ ಸುಮಾರು ಶೇ. 34ಕ್ಕೆ ತಲುಪಲಿದೆ. ಈಗಾಗಲೇ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳು ಶೇ. 14.9ರಷ್ಟಿದ್ದಾರೆ. ಕ್ರಿಶ್ಚಿಯನ್ನರು ಸೇ. 31.4 ಮತ್ತು ಮುಸ್ಲಿಮರು ಶೇ. 29.7ರಷ್ಟು ಇದ್ದಾರೆ. ವಿಶ್ವದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ 2050ರ ವೇಳೆಗೆ ಹಿಂದೂಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಿದೆ.