ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿದೆ. ಆದರೆ ಈ ಟೂರ್ನಿ ಗೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
ಇತ್ತ ಟೀಂ ಇಂಡಿಯಾವನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲು ಪಾಕಿಸ್ತಾನ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಅಲ್ಲದೆ ಟೀಂ ಇಂಡಿಯಾ ಬಂದೇ ಬರುತ್ತದೆ ಎಂಬ ಭರವಸೆಯೊಂದಿಗೆ ಭಾರತ ತಂಡದ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸುವುದಾಗಿ ಪಿಸಿಬಿ ಡ್ರಾಫ್ಟ್ ವೇಳಾಪಟ್ಟಿಯನ್ನು ಸಹ ಸಿದ್ಧಪಡಿಸಿತ್ತು. ಆದರೀಗ ಭಾರತದ ಮುಂದೆ ತಲೆಬಾಗಿರುವ ಪಾಕಿಸ್ತಾನ 2025 ರ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪಂದ್ಯಗಳು ಯುಎಇಯಲ್ಲಿ ನಡೆಯಬಹುದು. ಅಂದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಈ ಹಿಂದೆ 2023ರಲ್ಲಿ ನಡೆದ ಏಷ್ಯಾಕಪ್ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆದಿತ್ತು. ಆಗಲೂ ಏಷ್ಯಾಕಪ್ ಆತಿಥ್ಯ ಪಾಕಿಸ್ತಾನದ ಬಳಿಯೇ ಇತ್ತಾದರೂ, ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.