ಇಂದು ಭಾರತೀಯ ವಾಯುಪಡೆ ದಿನ: ಐಎಎಫ್‌ನ 90 ವರ್ಷಗಳ ಇತಿಹಾಸದಲ್ಲಿ ಮರೆಯಲಾಗದ ಸಾಧನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದೊಂದಿಗೆ ನಾಲ್ಕು ಯುದ್ಧಗಳು, ರಣರಂಗದಲ್ಲಿ ಅವಿಸ್ಮರಣೀಯ ಗೆಲುವುಗಳು, ಭಯೋತ್ಪಾದಕರನ್ನು ಕೊಂದ ವೈಮಾನಿಕ ದಾಳಿ ಇವುಗಳ ಜೊತೆಗೆ ಮತ್ತು ಇತರ ಹಲವು ಮೈಲಿಗಲ್ಲುಗಳು ಎಲ್ಲಾ ಒಟ್ಟಾದರೆ ಭಾರತೀಯರ ಹೆಮ್ಮೆಯ ವಾಯುಪಡೆ. ಅಂದಹಾಗೆ ಭಾರತೀಯ ವಾಯುಸೇನೆ ಇಂದಿಗೆ 90 ವರ್ಷ ಪೂರೈಸಿದೆ. ಅಕ್ಟೋಬರ್‌ 8ರಂದು ವಾಯುದಳದ ಅಭೂತಪೂರ್ವ ಸಾಧನೆಯ ಸಂಕೇತವಾಗಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಭಾರತೀಯ ಸೇನೆ, ನೌಕಾಸೇನೆ, ವಾಯುಸೇನೆ ಭಾರತದ ರಕ್ಷಣೆಯಲ್ಲಿ ಈ ಮೂರು ಪಡೆಗಳ ಪಾತ್ರ ಬಹಳ ನಿರ್ಣಾಯಕ. ಭೂಮಿ, ಜಲ, ಆಕಾಶ ಯಾವುದೇ ವಿಧಾನದಿಂದ ಬಂದರೂ ಶತ್ರುಗಳ ಆಕ್ರಮಣವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕಿದೆ. ದೇಶದ ಮೂರು ಪಡೆಗಳ ಪೈಕಿ ಭಾರತೀಯ ವಾಯುಸೇನೆ ಬಗ್ಗೆ  ವಿಶೇಷವಾಗಿ ಸ್ಮರಿಸಬೇಕು. 9 ದಶಕಗಳ ಇತಿಹಾಸದಲ್ಲಿ ಐಎಎಫ್‌ ಹಲವು ಮೈಲಿಗಲ್ಲುಗಳನ್ನು ದಾಟಿದೆ. ನಮ್ಮ ವಾಯುಪಡೆಯು ಜರ್ಮನಿ, ಆಸ್ಟ್ರೇಲಿಯಾ, ಜಪಾನ್‌ಗಿಂತ ಉತ್ತಮವಾಗಿದೆ.

90ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಚಂಡೀಗಢದಲ್ಲಿ ವಾಯುಪಡೆಯ ಸುಮಾರು 80 ವಿಮಾನಗಳು ಆಕಾಶದಲ್ಲಿ ಅದ್ದೂರಿ ಪ್ರದರ್ಶನ ನೀಡಲಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ಸುಖ್ನಾ ಸರೋವರದ ಮೇಲೆ ನಡೆಸಲು ಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಂಟೇಜ್ ಹಾಗೂ ಪ್ರಸ್ತುತ ಆಧುನಿಕ ವಿಮಾನಗಳಾದ ರಫೇಲ್, ಪ್ರಚಂಡ್‌, ಚಿನೂಕ್, ಅಪಾಚೆ, ಹೂವಾರ್ಡ್ ಎಂಐ-35, ಸು-30, ಎಂಎ- 17, ಜ್ವಾಗರ್ ಮತ್ತು ಡಕೋಟಾ ಆಕಾಶಗಂಗಾ, ಎನ್‌ಸೈನ್, ಏಕಲವ್ಯ, ತ್ರಿಶೂಲ್, ಮೆಹರ್, ಶಂಶೇರ್, ವಜ್ರ, ಸಾರಂಗ್ ಮತ್ತು ರ್ಸೂಕಿರಣ್ ಸೇರಿದಂತೆ ಹಲವು ವಿಶೇಷ ವಿಮಾನಗಳ ಪ್ರದರ್ಶನವಿರಲಿದೆ.

ಭಾರತೀಯ ವಾಯುಪಡೆಯ ಇತಿಹಾಸ

ಅಕ್ಟೋಬರ್ 1932 ರ ಎಂಟನೇ ತಾರೀಖಿನಂದು ಭಾರತೀಯ ವಾಯುಪಡೆಯು ಬ್ರಿಟಿಷ್ ಸರ್ಕಾರದ ಸಹಾಯಕ ಪಡೆಯಾಗಿ ರೂಪುಗೊಂಡಿತು. ಭಾರತೀಯ ವಾಯುಪಡೆಯ ಗುರಿ ಭಾರತೀಯ ವಾಯುಪ್ರದೇಶವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲ, ಯುದ್ಧದ ಸಮಯದಲ್ಲಿ ಶತ್ರುಗಳನ್ನು ನಾಶಪಡಿಸುವುದು. ಎರಡನೆಯ ಮಹಾಯುದ್ಧದ ಸಮಯದಲ್ಲಿ, ಭಾರತೀಯ ವಾಯುಪಡೆಯನ್ನು ʻರಾಯಲ್ʼ ಎಂಬ ಹೆಸರಿನಿಂದ ಗೌರವಿಸಲಾಯಿತು. 1947 ರಲ್ಲಿ ಸ್ವಾತಂತ್ರ್ಯದ ನಂತರ. ʻರಾಯಲ್ ಇಂಡಿಯನ್ ಏರ್ ಫೋರ್ಸ್ʼ ಅನ್ನು ʻಡೊಮಿನಿಯನ್ ಆಫ್ ಇಂಡಿಯಾʼ ಎಂದು ಹೆಸರಿಸಲಾಯಿತು. 1950 ರಿಪಬ್ಲಿಕನ್ ಇಂಡಿಯಾದಲ್ಲಿ ರಾಯಲ್ ಪದವನ್ನು ಕೈಬಿಡಲಾಯಿತು. ಇಂಡಿಯಾ ಏರ್‌ಫೋರ್ಸ್‌ ನ ಧ್ಯೇಯವಾಕ್ಯ ‘ ನಭ ಸ್ಪರ್ಶಂ ದೀಪ್ತಮ್’, ಅಂದರೆ ‘ ಆಕಾಶವನ್ನು ವೈಭವದಿಂದ ಸ್ಪರ್ಶಿಸಿ’ ಎಂದರ್ಥ.

ಐಎಎಫ್‌ನ ಸಾಧನೆಗಳು

  • 1950 ರ ನಂತರ 1965, 1971 ಮತ್ತು 1999 ರಲ್ಲಿ ಭಾರತ-ಪಾಕ್ ನಡುವೆ ಯುದ್ಧಗಳು ನಡೆದಿವೆ. ಈ ಮೂರೂ ಯುದ್ದಗಳಲ್ಲಿ ಭಾರತ ಜಯಭೇರಿ ಸಾಧಿಸಿದೆ.
  • 1965ರ ಭಾರತ-ಪಾಕ್ ಯುದ್ಧದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬರಲಾಯಿತು. ಈ ವಿಷದಲ್ಲಿ.. ಪಾಕಿಸ್ತಾನದ ಮೇಲೆ ಭಾರತ ಮೇಲುಗೈ ಸಾಧಿಸಿತು.
  • 1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ವಾಯುಸೇನೆ ಪ್ರಮುಖ ಪಾತ್ರ ವಹಿಸಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. 90 ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಸೇನಾ ಪಡೆಗಳು ಶರಣಾದವು. ಮೇಲಾಗಿ ಪಾಕಿಸ್ತಾನ ತನ್ನ ಅರ್ಧದಷ್ಟು ನೌಕಾಪಡೆ, ಕಾಲು ಭಾಗ ವಾಯುಪಡೆ ಮತ್ತು ಮೂರನೇ ಒಂದು ಭಾಗ ಸೇನೆಯನ್ನು ಕಳೆದುಕೊಂಡಿದೆ.
  • 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಭಾರತೀಯ ವಾಯುಸೇನೆ ತನ್ನ ಶಕ್ತಿ ಪ್ರದರ್ಶಿಸಿತ್ತು. ಹಿಮ ಬೆಟ್ಟಗಳಲ್ಲಿ IAF ವಿಮಾನಗಳು ಪಾಕಿಸ್ತಾನ ಸೇನೆಯ ಚಳಿ ಬಿಡಿಸಿದವು. ಇದನ್ನು ʻಆಪರೇಷನ್ ಸಫೇದ್ ಸಾಗರ್ʼ ಎಂದು ಹೆಸರಿಸಲಾಯಿತು.
  • 1962 ರಲ್ಲಿ ಭಾರತ ಮತ್ತು ಚೀನಾ ನಡುವೆಯೂ ಯುದ್ಧ ನಡೆಯಿತು. ವಿವಾದಿತ ಹಿಮಾಲಯದ ಗಡಿಯು ಯುದ್ಧಕ್ಕೆ ಮೂಲ ಕಾರಣವಾದರೂ, ಇತರ ಸಮಸ್ಯೆಗಳೂ ಯುದ್ಧಕ್ಕೆ ನಾಂದಿ ಹಾಡಿದವು.
  • 1959 ರಲ್ಲಿ ಟಿಬೆಟಿಯನ್ ದಂಗೆಯ ನಂತರ, ಭಾರತವು ಬೌದ್ಧ ಗುರು ದಲೈಲಾಮಾಗೆ ಆಶ್ರಯ ನೀಡಿದ್ದಕ್ಕೆ  ಗಡಿಯಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ.
  • ಅಕ್ಟೋಬರ್ 1962 ರಲ್ಲಿ ಚೀನಾ ಭಾರತವನ್ನು ಆಕ್ರಮಿಸಿತು. ಡ್ರ್ಯಾಗನ್ ಈಶಾನ್ಯ ಭಾರತದ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಈ ಯುದ್ಧದಲ್ಲಿ ಚೀನಾ ಸೇನೆ ಗೆದ್ದಿತು. ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯನ್ನು ಬಳಸಿಕೊಳ್ಳುವಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ವಿಫಲವಾಗಿತ್ತು. ಆಗಿನ ಪ್ರಧಾನಿ ನೆಹರೂ ಭಾರತೀಯ ವಾಯುಸೇನೆಯನ್ನು ಯುದ್ಧಕ್ಕೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಿದ್ದೇ ಚೀನಾ ಗೆಲುವಿಗೆ ಕಾರಣ ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಭಾರತೀಯ ವಾಯುಸೇನೆಯನ್ನು ಯುದ್ಧಕ್ಕೆ ಇಳಿಸಿದ್ದರೆ ಚೀನಾದೊಂದಿಗಿನ ಯುದ್ಧದಲ್ಲೂ ಭಾರತವೇ ಗೆಲ್ಲುತ್ತಿತ್ತು ಎಂಬ ವಿಶ್ವಾಸ ಇತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!