ಭಾರತದ ವಾಯುಸೇನೆಗೆ ಸಿಕ್ಕಿತು ಮತ್ತಷ್ಟು ಬಲ: ಎಚ್​ಎಎಲ್​ ನಿರ್ಮಿತ ಮೊದಲ ಲಘು ಯುದ್ಧ ವಿಮಾನ ಸೇನೆಗೆ ಹಸ್ತಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ವಾಯುಸೇನೆಗೆ ಮತ್ತೊಂದು ಬಲ ಸೇರ್ಪಡೆಯಾಗಿದೆ. ಆತ್ಮನಿರ್ಭರ್​ ಯೋಜನೆಯಡಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಿಸಿರುವ ಮೊದಲ ಸುಧಾರಿತ ತೇಜಸ್​ ಲಘು ಯುದ್ಧ ವಿಮಾನವನ್ನು ಸೇನೆಗೆ ಬುಧವಾರ ಹಸ್ತಾಂತರಿಸಿತು.

ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರಿಗೆ ಎಚ್‌ಎಎಲ್​ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಅವರು ನೆಲ ಮತ್ತು ಜಲದ ಮೇಲೆ ಸುಲಭವಾಗಿ ಹಾರಾಡಬಲ್ಲ ತೇಜಸ್​ ಸರಣಿಯ ಲಘು ಯುದ್ಧ ವಿಮಾನವನ್ನು ನೀಡಿದರು.

ಇದು ಎರಡು ಸೀಟಿನ ತರಬೇತಿ ವಿಮಾನವಾಗಿದ್ದು, ಇಂತಹ 83 ಯುದ್ಧ ವಿಮಾನಗಳ ತಯಾರಿಕೆಗೆ ಕೇಂದ್ರ ಸರ್ಕಾರ, ಎಚ್​ಎಎಲ್​ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ವಿಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು, ಇಂದು ಮಹತ್ವದ ದಿನವಾಗಿದೆ. ಮೊದಲ ಎಲ್‌ಸಿಎ ವಿಮಾನವನ್ನು ಸ್ವೀಕರಿಸಲಾಗಿದೆ. ಈಗಾಗಲೇ ಎರಡು ಎಲ್​ಸಿಎ ಸ್ಕ್ವಾಡ್ರನ್‌ಗಳನ್ನು ಸೇನೆಯಲ್ಲಿ ಸ್ಥಾಪಿಸಲಾಗಿದೆ. ಸೇನಾಬಲ ಹೆಚ್ಚಳಕ್ಕೆ 83 ಲಘು ಯುದ್ಧ ವಿಮಾನಗಳ ಖರೀದಿಗೆ ನೆಲದ ಸಂಸ್ಥೆಯಾದ ಎಚ್​ಎಎಲ್​ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬರುವ ವರ್ಷಗಳಲ್ಲಿ ನಾವು ಭಾರತೀಯ ವಾಯುಪಡೆಯಲ್ಲಿ 220 ಲಘು ಯುದ್ಧ ವಿಮಾನಗಳನ್ನು ಹೊಂದಲಿದ್ದೇವೆ ಎಂದು ಹೇಳಿದರು.

ನೆಲ ಮತ್ತು ಜಲದ ಮೇಲೆ ಏಕಕಾಲಕ್ಕೆ ಹಾರಾಡಬಲ್ಲ ಸುಧಾರಿತ ಲಘು ಯುದ್ಧ ವಿಮಾನಗಳ ಬೇಡಿಕೆ ಇಟ್ಟಿದ್ದ ಭಾರತೀಯ ವಾಯುಸೇನೆಗೆ ಬಲ ನೀಡಲು ಹಿಂದುಸ್ಥಾನ್​ ಏರೋನಾಟಿಕ್​ ಸಂಸ್ಥೆ (ಎಚ್​ಎಎಲ್​) ಜೊತೆಗೆ ಕೇಂದ್ರ ಸರ್ಕಾರ 45.7 ಕೋಟಿ ರೂಪಾಯಿ ವೆಚ್ಚದಲ್ಲಿ 83 ವಿಮಾನಗಳ ತಯಾರಿಕೆಗೆ 2021 ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. 2023-24 ರ ವೇಳೆಗೆ 8 ವಿಮಾನಗಳನ್ನು ಸೇನೆಗೆ ನೀಡಲು ಯೋಜಿಸಲಾಗಿದೆ. ಅದರ ಭಾಗವಾದ ಮೊದಲ ವಿಮಾನ ಈಗ ಕೈಸೇರಿದೆ. 2026-27ರ ಬಳಿಕ ಎಲ್ಲ ವಿಮಾನಗಳನ್ನು ಎಚ್​ಎಎಲ್ ನಿರ್ಮಿಸಿ ಕೊಡಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!