ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದಲ್ಲಿ ಚೀನಾ ಪುಂಡಾಟಿಕೆ ಮೆರೆಯುವುದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಚೀನಾದ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಚೀನಾವನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸಶಸ್ತ್ರಪಡೆಗಳು ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿವೆ. 36ರಫೇಲ್ ವಿಮಾನಗಳು ಭಾರತದ ಬತ್ತಳಿಕೆ ಸೇರಿದ್ದರೆ, ದೇಶೀಯವಾಗಿ ನಿರ್ಮಿತಗೊಂಡ ಅತ್ಯಾಧುನಿಕ ಕ್ಷಿಪಣಿ ವಿಧ್ವಂಸಕ ನೌಕೆ ʼಐಎನ್‌ಎಸ್ ಮುರ್ಮುಗಾವ್ʼ ನೌಕಾಪಡೆಗೆ ಸೇರಿದೆ. ಇನ್ನೊಂದಡೆ ಅಗ್ನಿ-5 ಪರೀಕ್ಷೆಯ ಮೂಲಕ ಚೀನಾಗೆ ಟಾಂಗ್ ಕೊಡುವಲ್ಲಿ ಭಾರತ ಯಶಸ್ವಿಯಾಗಿದೆ. ಈಗ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಲಿದ್ದು ಅತ್ಯಾಧುನಿಕ ಕ್ಷಿಪಣಿ ʼಪ್ರಳಯ್ʼ ಅನ್ನು ಪಡೆಯಲು ಭಾರತೀಯ ಸೇನೆ ಸಜ್ಜಾಗಿದೆ.
150ರಿಂದ 500 ಕಿಮೀ ವ್ಯಾಪ್ತಿ ಹೊದಿರುವ ಖಂಡಾಂತರ ಕ್ಷಿಪಣಿ ಇದಾಗಿದ್ದು ಕ್ಷಿಪಣಿಯ ಕೊನೆಯ ಪರೀಕ್ಷೆಯನ್ನು ಡಿಸೆಂಬರ್ 2021 ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿದೆ. ಇದು ಚೀನಾದ ಕ್ಷಿಪಣಿ ಶಕ್ತಿಗಳ ವಿರುದ್ಧ ಹೋರಾಡಲು ಭಾರತೀಯ ಸೇನೆಗೆ ಬಲ ನೀಡಲಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ ಈ ಕ್ಷಿಪಣಿಯು ಚೀನಾದ ಡಾಂಗ್‌ಫೆಂಗ್ 12 ಮತ್ತು ರಷ್ಯಾದ 9K720 ಇಸ್ಕಾಂಡರ್ ಗೆ ಸಮಾನವಾದ ಶಕ್ತಿ ಹೊಂದಿದೆ. ಇವೆರಡೂ ಸಹ ಅಲ್ಪ-ಶ್ರೇಣಿಯ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ. ಇದನ್ನು DRDO ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ಕಾರ್ಯಕ್ರಮದ ಭಾಗವಾಗಿ ಅಭಿವೃದ್ಧಿಪಡಿಸಿದ್ದು ಪೃಥ್ವಿ ಡಿಫೆನ್ಸ್ ವೆಹಿಕಲ್ ನ ಭಾಗವಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ.
ಚೀನೀ ಮೂಲಸೌಕರ್ಯ ಮತ್ತು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿಸಲು ಹೀಗೆ ದ್ವಿಬಳಕೆಗೆ ಪ್ರಳಯ್ ಅನುವು ಮಾಡಿಕೊಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾವು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಉದ್ದಕ್ಕೂ ರಸ್ತೆಗಳು, ಸೇತುವೆಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ಮಾರ್ಗಗಳ ದೊಡ್ಡ ಜಾಲವನ್ನು ನಿರ್ಮಿಸಿದೆ. ಪ್ರಳಯ್ ನಂತಹ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಯು ಭಾರತೀಯ ಪಡೆಗಳಿಗೆ ಈ ಮೂಲಸೌಕರ್ಯವನ್ನು ಗುರಿಯಾಗಿಸಲು ಅನುವು ಮಾಡಿಕೊಡುತ್ತದೆ.